ಅಕ್ರಮ ಮರಳುಗಾರಿಕೆ ತಡೆಗೆ ಸಮಿತಿ ರಚಿಸಿದ ಉಡುಪಿ ಡೀಸಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಅಕ್ರಮ ಮರಳುಗಾರಿಕೆ ತಡೆಯಲು ಹೊಳೆ ದಡದಲ್ಲಿರುವ ಅಕ್ರಮ ಶೆಡ್ಡುಗಳನ್ನು ಮತ್ತು ಈ ಸಂಬಂಧ ಸಂಗ್ರಹಿಸಿಟ್ಟಿರುವ ಮೂಲ ಸೌಕರ್ಯಗಳನ್ನು ತೆರವುಗೊಳಿಸಲು ಪೊಲೀಸರನ್ನು ಒಳಗೊಂಡ ಸಮಿತಿಯನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ರಚಿಸಿದ್ದಾರೆ.

ಅಕ್ರಮ ಶೆಡ್ಡುಗಳನ್ನು ಮುಟ್ಟುಗೋಲು ಹಾಕುವ ಆದೇಶ ಹೊರಡಿಸಲಾಗಿದ್ದು, ಕಾರ್ಯಾಚರಣೆಗೆ ಸಮಯ ಮಿತಿಯನ್ನು ನಿಗದಿಪಡಿಸಲಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರುಗಳಲ್ಲಿಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಿಯಂತ್ರಿಸಲು ಕೈಗೊಳ್ಳಬೇಕಾದ ನಡೆದ ತುರ್ತು ಸಭೆಯಲ್ಲಿ ದೋಣಿಗಳನ್ನು ಹಾಗೂ ಡ್ರೆಜ್ಜಿಂಗ್ ಯಂತ್ರ ಮತ್ತು ಕ್ರೇನ್ ಉಪಯೋಗಿಸಿ ಜಪ್ತಿ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಿ ಆರ್ ಪಿ ಸಿ ಸೆಕ್ಷನ್ 144ರ ಅಡಿಯಲ್ಲಿ ಆದೇಶ ಹೊರಡಿಸಿ ಅಕ್ರಮ ತಡೆಯಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಅಲ್ಲದೆ ಸಿ ಆರ್ ಪಿ ಸಿ ಸೆಕ್ಷನ್ 110 ಅಡಿಯಲ್ಲಿ ಹಾಗೂ 107ರಡಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ದ ಕ್ರಮಕೈಗೊಳ್ಳಲು ಸೂಚನೆ ನೀಡಿದರು.

ಪಟ್ಟಾ ಜಮೀನಿನಲ್ಲೂ ಅಕ್ರಮ ಮರಳು ಸಂಗ್ರಹಕ್ಕೆ ಅವಕಾಶವಿಲ್ಲ. ಸಂಗ್ರಹಿಸಿದವರಿಗೆ ನೋಟೀಸು ನೀಡಬೇಕು. ಅಧಿಕಾರಿಗಳು ಕಾನೂನು ಪಾಲಿಸಬೇಕು. ಸರಕಾರಿ ವ್ಯವಸ್ಥೆಯು ಅಪಹಾಸ್ಯಕ್ಕೀಡಾಗದಂತೆ ಪಕ್ಕಾ ಕಾನೂನು ಪರಿಪಾಲನೆಯಾಗಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು.

ಹೊರರಾಜ್ಯದಿಂದ ಮರಳು ಬರುವ ಸಂದರ್ಭದಲ್ಲಿ ಪರ್ಮಿಟ್ ಪರಿಶೀಲಿಸಬೇಕು. ಒಂದು ವಾರದೊಳಗಾಗಿ ಅಕ್ರಮ ಮರಳುಗಾರಿಕೆ ತಡೆಯಲು ಯುದ್ಧೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣ ಮಾತನಾಡಿ “ಪೊಲೀಸ್ ಇಲಾಖೆ ಸರ್ವ ಸಹಕಾರ ನೀಡಲು ಬದ್ಧವಾಗಿದೆ. ಸ್ಕ್ವಾಡ್ ರಚಿಸಲಾಗಿದೆ. ಕುಂದಾಪುರದಲ್ಲಿ ಮರಳು ಮಾಫಿಯಾ ತಡೆಗೆ ಪ್ರತ್ಯೇಕವಾಗಿ ಪೊಲೀಸ್ ತಂಡವನ್ನೂ ರಚಿಸಲಾಗಿದೆ” ಎಂದರು.

ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ನಂ.2ನೇ ಉಪವಿಭಾಗ, ಬೊಬ್ಬರ್ಯಕಟ್ಟೆ ಬಳಿ, ಕುಂದಾಪುರ (9448428545), ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, (9008599623), ಮತ್ತು ಕಾರ್ಯಪಾಲಕ ಅಭಿಯಂತರರು, ಕೆ ಆರ್ ಐ ಡಿ ಎಲ್, ರಜತಾದ್ರಿ, ಮಣಿಪಾಲ (9449534792) ಇವರಿಗೆ ಮರಳಿನ ಬೇಡಿಕೆ ಸಲ್ಲಿಸಬಹುದು ಎಂದರು.