ಉಡುಪಿ ಪೇದೆ ಅಮಾನತಿನಲ್ಲಿ ತಪ್ಪಿತಸ್ಥರು ಯಾರು?

ರಾಜಕೀಯ ಹಗರಣವಾದ ಹಲ್ಲೆ ಪ್ರಕರಣ

ಹೆಸರಿಗೆ ಮಸಿ ಹಚ್ಚಿಕೊಂಡ ಪ್ರಮೋದ ಮಧ್ವರಾಜ

ವಿಶ್ಲೇಷಣೆ

ಸಾಮಾನ್ಯವಾಗಿ ಹೆಚ್ಚು ಗಮನಕ್ಕೆ ಬಾರದೆ ಹೋಗುವ ಸಾಮಾನ್ಯ ಪ್ರಕರಣವೊಂದಕ್ಕೆ ರಾಜಕೀಯ ಮಧ್ಯಪ್ರವೇಶದಿಂದ ಅಗತ್ಯಕ್ಕಿಂತ ಹೆಚ್ಚೇ ಬಣ್ಣ ಬಳಿಯಲಾಗಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪೊಲೀಸ್ ಪೇದೆಯ ಅಮಾನತಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ನಾಯಕರು ಎಬ್ಬಿಸಿರುವ ರಾಡಿ ಪ್ರಮೋದಗೆ ಕೊಂಚ ಅಂಟಿದಂತೆ ಕಾಣುತ್ತಿದೆ.

ಏಪ್ರಿಲ್ 5ರಂದು ಮಲ್ಪೆ ಕಾನ್‍ಸ್ಟೇಬಲ್ ಪ್ರಕಾಶ್ ಮತ್ತು ಅವರ ಪತ್ನಿ ಔಷಧಿ ಅಂಗಡಿಯೊಂದರಿಂದ ಹಿಂತಿರುಗುತ್ತಿದ್ದಾಗ ಮೀನು ಕಾರ್ಖಾನೆಯಲ್ಲಿ ಚಾಲಕ ಸಿಬ್ಬಂದಿಯಾಗಿರುವ ಕುಮಾರ್, ಪ್ರಕಾಶರ ಪತ್ನಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಆಕ್ರೋಶಗೊಂಡ ಪ್ರಕಾಶ್ ಕುಮಾರಗೆ ಹೊಡೆದಿದ್ದಾರೆ. ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಈ ಹಿನ್ನೆಲೆಯಲ್ಲಿ `ಕರ್ತವ್ಯ ನಿರ್ವಹಿಸಲು ವಿಫಲವಾಗಿರುವುದು ಮತ್ತು ಕಾನೂನನ್ನು ಕೈಗೆ ತೆಗೆದುಕೊಂಡಿರುವ’ ಆರೋಪದಲ್ಲಿ ಉಡುಪಿ ಡಿ ವೈ ಎಸ್ ಪಿ ಅವರು ಪ್ರಕಾಶರನ್ನು ಅಮಾನತು ಮಾಡಿದ್ದಾರೆ. ಪ್ರಕಾಶರನ್ನು ವಿಚಾರಣೆಗೂ ಒಳಪಡಿಸಲಾಗಿದೆ. ಕುಮಾರ್ ಮೇಲೂ ಐಪಿಸಿ ಸೆಕ್ಷನ್ 323, 354, ಮತ್ತು 34 ಅನ್ವಯ ಮೊಕದ್ದಮೆ ಹೂಡಲಾಗಿದೆ.

ಪ್ರಕಾಶ್ ಅಮಾನತಿನ ಹಿಂದೆ ಮಧ್ವರಾಜ್ ಇದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. `ಮರಳು ಮಾಫಿಯಾ ಜಿಲ್ಲಾಧಿಕಾರಿ ಮೇಲೆ ದಾಳಿ ಮಾಡಿದಾಗ ಬಾಯಿ ಮುಚ್ಚಿಕೊಂಡಿದ್ದ ಮಧ್ವರಾಜ್

ಈಗ ಕ್ರಿಯಾಶೀಲರಾಗಿದ್ದಾರೆ. ಸಚಿವರು ಮಹಿಳೆಗೆ ಬೆಂಬಲಿಸುವ ಬದಲಾಗಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಬೆಂಬಲಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸುವ ಕೆಲಸವಿದು’ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಮಂಗಳೂರು ವಿಭಾಗದ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.

ಆದರೆ ಸಚಿವ ಮಧ್ವರಾಜ್ ಈ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದಿದ್ದಾರೆ. `ಕುಮಾರ್ ಕಳೆದ 15 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಉತ್ತಮ ನಡವಳಿಕೆ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಹಾಗಿದ್ದರೂ ತಪ್ಪು ಮಾಡಿದ್ದರೂ, ಪೇದೆ ದೂರು ದಾಖಲಿಸಬೇಕಿತ್ತು. ಕುಮಾರ್ ಮೇಲೆ ಹಲ್ಲೆ ಮಾಡಿದ್ದು ತಪ್ಪು; ಎಂದು ಮಧ್ವರಾಜ್ ಹೇಳಿದ್ದಾರೆ.

`ಕುಮಾರಗೆ ಬೆನ್ನು ಮೂಳೆಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ನಿಯಮಾನುಸಾರ ಪ್ರಕಾಶರನ್ನು ಅಮಾನತು ಮಾಡಲಾಗಿದೆ. ಯಾರೂ ಒತ್ತಡ ಹೇರಿಲ್ಲ. ದೂರು ದಾಖಲಿಸದಂತೆ ಬೇಡಿಕೊಂಡು ಪೇದೆ ನನ್ನ ಪತ್ನಿ ನಡೆಸುತ್ತಿರುವ ನಮ್ಮ ಕಾರ್ಖಾನೆಗೂ ಬಂದಿದ್ದಾರೆ. ಇಂದು ಚಾಲಕನಿಗೆ ಆದ ಗತಿ ನಾಳೆ ಸಾಮಾನ್ಯ ಪ್ರಜೆಗೂ ಆಗಬಹುದಲ್ಲವೆ?’ ಎಂದು ಮಧ್ವರಾಜ್ ಪ್ರಶ್ನಿಸಿದ್ದಾರೆ.