ಉಡುಪಿ ಕಾಂಗ್ರೆಸ್ ವತಿಯಿಂದ ನೋಟು ರದ್ದತಿ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

 ಉಡುಪಿ : ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರವು ಯಾವುದೇ ಸಿದ್ಧತೆಗಳಿಲ್ಲದೇ, 500, 1,000 ಸಾವಿರ ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿರುವುದರ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷವು ಸೋಮವಾರ ಉಡುಪಿ ನಗರದ ಸರ್ವೀಸ್ ಬಸ್ ನಿಲ್ದಾಣ ಬಳಿಯ ಕ್ಲಾಕ್ ಟವರ್ ಎದುರು ಆಕ್ರೋಶ್ ದಿವಸ್ ಅಂಗವಾಗಿ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಂ ಎ ಗಫೂರ್, “ನೋಟುಗಳನ್ನು ಅಮಾನ್ಯ ಮಾಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಡೀ ಭಾರತ ದೇಶವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ನೋಟುಗಳ ಅಮಾನ್ಯ ಮಾಡುವ ಬಗ್ಗೆ ಮೋದಿಯು ವಿರೋಧ ಪಕ್ಷಗಳ ನಾಯಕರನ್ನಾಗಲಿ, ಆರ್ಥಿಕ ತಜ್ಞರನ್ನಾಗಲಿ ಕರೆಸಿಕೊಂಡು ಚರ್ಚೆ ನಡೆಸಿಲ್ಲ”  ಎಂದು ಕಿಡಿಕಾರಿದ್ದಾರೆ.

ಯಾವುದೇ ಪೂರ್ವ ಸಿದ್ಧತೆಗಳಿಲ್ಲದೇ, ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ದೇಶದ ಜನಸಾಮಾನ್ಯರು ಬೀದಿಯಲ್ಲಿ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೋಟುಗಳ ಅಮಾನ್ಯದಿಂದ ದೇಶದ ಆರ್ಥಿಕತೆ ಕುಸಿದಿದೆ. ನೋಟುಗಳ ಅಮಾನ್ಯದಿಂದ ಜನಸಾಮಾನ್ಯರಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದರೂ ಮೋದಿ ಸರಕಾರವು ಪರಿಸ್ಥಿತಿಯನ್ನು ಸುಧಾರಿಸಿಲ್ಲ” ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನರಸಿಂಹ ಮೂರ್ತಿ, ಜನಾರ್ಧನ ಭಂಡಾರ್‍ಕರ್, ಸತೀಶ್ ಅಮೀನ್ ಪಡುಕೆರೆ, ರಮೇಶ್ ಕಾಂಚನ್, ನಾಗೇಶ್ ಕುಮಾರ್ ಉದ್ಯಾವರ ಮೊದಲಾದವರು ಇದ್ದರು.