ಕಟ್ಟಡ ಟೆಂಡರ್ ಪ್ರಕ್ರಿಯೆಯಲ್ಲಿ ಉಡುಪಿ ನಗರಸಭೆಗೆ ಮುಖಭಂಗ

ಟೆಂಡರ್ ರದ್ದುಗೊಳ್ಳಲು ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಸದಸ್ಯರು

ಸಭೆಯಲ್ಲಿ ಸದಸ್ಯರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಇರುವ ವಿಶ್ವೇಶ್ವರಯ್ಯ ಮಾರುಕಟ್ಟೆಯ ನೂತನ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಉಡುಪಿ ನಗರಸಭೆಯು ಕರೆಯಲಾದ ಟೆಂಡರಿನಲ್ಲಿ ನಗರದ ಮಾಂಡವಿ ಬಿಲ್ಡರ್ಸ್ ಮಾಲಿಕ ಜೆರ್ರಿ ವಿನ್ಸಂಟ್ ಒಬ್ಬರದ್ದೇ ಟೆಂಡರನ್ನು ನಗರಸಭೆ ಕಾನೂನುಬಾಹಿರವಾಗಿ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿದ್ದು, ಅದನ್ನು ಬೆಂಗಳೂರಿನ ಪೌರಾಡಳಿತ ಇಲಾಖೆ ರದ್ದುಗೊಳಿಸುವ ಮೂಲಕ ನಗರಸಭೆಗೆ ಮುಖಭಂಗವಾಗಿದೆ. ಇದಕ್ಕೆ ಹೊಣೆಯಾರು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳವ ನಿರ್ಣಯ ತೆಗೆದುಕೊಳ್ಳಬೇಕೆಂದು ವಿಪಕ್ಷ ಬಿಜೆಪಿ ಸದಸ್ಯರಾದ ಯಶಪಾಲ್ ಸುವರ್ಣ, ದಿನಕರ ಶೆಟ್ಟಿ ಸಹಿತ ಅನೇಕ ಸದಸ್ಯರು ಒಕ್ಕೊರಲಿನಿಂದ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದನದ ಎದುರು ಪ್ರತಿಭಟಿಸಿ, ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಎದುರು ಆಗ್ರಹಿಸಿದ ಘಟನೆ ನಡೆದಿದೆ.

ಆ ವೇಳೆ ಆಡಳಿತ ಕಾಂಗ್ರೆಸ್ ಸದಸ್ಯರಾದ ರಮೇಶ್ ಕಾಂಚನ್, ಜನಾರ್ದನಾ ಭಂಡಾರಕರ್ ಸಹಿತ ಕೆಲ ಸದಸ್ಯರ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆಯುವ ಮೂಲಕ ಸಭೆ ಗದ್ದಲಮಾಯವಾಯಿತು. ಬೆಂಗಳೂರಿನ ಪೌರಾಡಳಿತ ಇಲಾಖೆ ಇದೀಗ ಮರು ಟೆಂಡರ್ ಕರೆಯಲು ಸೂಚನೆ ನೀಡಿದ್ದರೂ, ವಿಶ್ವೇಶ್ವರಯ್ಯ ಮಾರುಕಟ್ಟೆಯ ವ್ಯಾಪಾರಿಗಳ, ಪಾರ್ಕಿಂಗ್ ಹಾಗೂ ದೈವಸ್ಥಾನಗಳ ಸಮಸ್ಯೆ ಬಗ್ಗೆ ಪರಿಹರಿಸಲು ಅಲ್ಲಿರುವವರನ್ನು ಕರೆದು ಚರ್ಚೆ ನಡೆಸಬೇಕೆಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ಸದಸ್ಯ ಗಣೇಶ್ ನೆರ್ಗಿ ಮಾತನಾಡಿ, ಉಡುಪಿ ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು  ಆರು ತಿಂಗಳ ಹಿಂದೆ ನಗರಸಭೆಗೆ ಮನವಿ ನೀಡಿದರೂ, ಇಲ್ಲಿಯ ತನಕ ಪ್ರತಿಮೆ ಸ್ಥಾಪಿಸಲು ಮುಂದಾಗಿಲ್ಲ. ಕೂಡಲೇ ಪ್ರತಿಮೆ ಸ್ಥಾಪಿಸಲು ನಗರಸಭೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.