ಬೀದಿಬದಿ ವ್ಯಾಪಾರಿಗಳನ್ನು ಬಲವಂತ ತೆರವುಗೊಳಿಸಿದ ಉಡುಪಿ ನಗರಸಭೆ, ಪೊಲೀಸ್ ವಿರುದ್ಧ ಜನಾಕ್ರೋಶ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹಣ್ಣು, ತರಕಾರಿ ಮಾರುತ್ತಿದ್ದ ಬೀದಿಬದಿ ಬಡ ವ್ಯಾಪಾರಿಗಳ ತಳ್ಳುಗಾಡಿಗಳನ್ನು ನಗರಸಭೆಯ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಅಮಾನವೀಯ ರೀತಿಯಲ್ಲಿ ತೆರವುಗೊಳಿಸಿದ ಘಟನೆ ಬುಧವಾರ ನಡೆದಿದೆ. ಈ ವೇಳೆ ಸಾರ್ವಜನಿಕರು ಮತ್ತು ಗಾಡಿಗಳ ಮಾಲಕರು ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು. ಒಂದು ಹಂತದಲ್ಲಿ ಮಾತಿನ ಚಕಮಕಿಯೂ ನಡೆಯಿತು.

ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ನೋಟಿಸ್ ಹಚ್ಚಿದ ನಗರಸಭೆ, ಇಲ್ಲಿ ಬೀದಿಬದಿ ವ್ಯಾಪಾರಸ್ಥರು ಮತ್ತು ಗೂಡಂಗಡಿಗಳು ಸರಕಾರಿ ಜಾಗವನ್ನು ಆಕ್ರಮಿಸಿಕೊಂಡು ವ್ಯಾಪಾರ ನಿರ್ವಹಿಸಬಾರದು ಎಂದು ಎಚ್ಚರಿಸಿತ್ತು. ಈ ಜಾಗ ಪಾರ್ಕಿಂಗ್ ಮತ್ತು ಪಾದಚಾರಿಗಳಿಗೆ ಮೀಸಲಿಡಲಾಗಿದೆ ಎಂದಿತ್ತು. ಆದರೂ ನೋಟಿಸಿಗೆ ಕ್ಯಾರೇ ಅನ್ನದ ಬೀದಿಬದಿ ವರ್ತಕರು ವ್ಯಾಪಾರ ಮಾಡುತ್ತಿದ್ದರು.

ಬುಧವಾರ ಸಂಜೆ ಪೊಲೀಸ್ ಬಲದೊಂದಿಗೆ ಬಂದ ನಗರಸಭೆ ಅಧಿಕಾರಿಗಳು ಇಲ್ಲಿನ ಬೀದಿಬದಿ ವ್ಯಾಪಾರಸ್ಥರನ್ನು, ಅವರ ತಳ್ಳುಗಾಡಿಗಳನ್ನು ತೆರವು ಮಾಡಿದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಾಪಾರಿಗಳ ಹಣ್ಣು-ತರಕಾರಿಗಳನ್ನು ರಸ್ತೆಗೆಸೆದು ತಳ್ಳು ಗಾಡಿಗಳನ್ನು ನಗರಸಭಾಧಿಕಾರಿಗಳು ಪೆÇಲೀಸರ ಸಹಕಾರದೊಂದಿಗೆ ಬಲತ್ಕಾರವಾಗಿ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದು ನೆರೆದಿದ್ದವರ ಮನದಲ್ಲಿ ಆಕ್ರೋಶ ಮೂಡಿಸಿತ್ತು. ಯಾವುದೇ ಕನಿಕರವಿಲ್ಲದೇ ವ್ಯಾಪಾರಿಗಳನ್ನು ಈ ರೀತಿಯ ಅಮಾನವೀಯ ವರ್ತನೆಯಿಂದ ತೆರವುಗೊಳಿಸುತ್ತಿರುವುದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂತು.

ಅಧಿಕಾರಿಗಳು ಬಡ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪಾರ್ಕಿಂಗ್ ಜಾಗ ಬಿಡದೇ ಭಾರೀ ಅಕ್ರಮ ಕಟ್ಟಡಗಳನ್ನು ಕಟ್ಟಿ, ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸುವ ಶ್ರೀಮಂತರನ್ನು ಕೇಳದ ಅಧಿಕಾರಿಗಳು ಬಡ ವ್ಯಾಪಾರಿಗಳ ಬಾಳಿನಲ್ಲಿ ಆಡವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಸುಮಾರು 10,000 ರೂ.ಗಳಿಗೂ ಅಧಿಕ ಮೌಲ್ಯದ ಹಣ್ಣು, ತರಕಾರಿ ನಷ್ಟವಾಗಿದೆ ಎಂದು ಹೇಳಲಾಗಿದೆ.