ಪವರ್ ಆಫ್ ಅಟಾರ್ನಿಯನ್ನು ಪತ್ನಿಗೆ ಕೊಟ್ಟ ಪ್ರಮೋದ್

ಉಡುಪಿ ಜಿಲ್ಲಾ ಬಿಜೆಪಿ ಲೇವಡಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ತನ್ನ ಸಂಸ್ಥೆಯ ಕಾರು ಚಾಲಕ ಪೇದೆ ಮೇಲೆ ಹಲ್ಲೆ ನಡೆಸಿ ಇದೀಗ ಆಸ್ಪತ್ರೆಗೆ ದಾಖಲಾಗಿರುವ ಕಾರು ಚಾಲಕನನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡುತ್ತಿರುವ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಜಿಲ್ಲಾ ಬಿಜೆಪಿ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸೋಮವಾರದಂದು ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್, “ಉಡುಪಿ ಜಿಲ್ಲೆಯಲ್ಲಿ ತಾನು ಇಲ್ಲದ ಸಮಯದಲ್ಲಿ ತನ್ನ ಸಚಿವ ಸ್ಥಾನದ ಪವರ್ ಆಫ್ ಅಟಾರ್ನಿಯನ್ನು ಪ್ರಮೋದ್ ಮಧ್ವರಾಜ್ ತನ್ನ ಪತ್ನಿಗೆ ನೀಡಿದ್ದಾರೋ ಎಂಬ ಅನುಮಾನ ಮೂಡಿದೆ” ಎಂದು ಲೇವಡಿ ಮಾಡಿದರು.

ಪ್ರಮೋದ್ ಪತ್ನಿ ಸುಪ್ರಿಯಾ ಮಧ್ವರಾಜ್ ತನ್ನ ಫ್ಯಾಕ್ಟರಿಗೆ ಸಮವಸ್ತ್ರ ಸಹಿತ ಪೇದೆಯನ್ನು ಕರೆಸಿ ಆರೋಪಿ ಕಾರು ಚಾಲಕನ ಕಾಲು ಹಿಡಿಸಿ ಅವಮಾನ ಮಾಡಿರುವುದು ನೋಡಿದರೆ ಪವರ್ ಆಫ್ ಅಟಾರ್ನಿ ಇವರ ಬಳಿ ಇದ್ದಂತೆ ವರ್ತಿಸುತ್ತಿದ್ದಾರೆ.

ಪೊಲೀಸರ ತನಿಖೆಯನ್ನು ಸಚಿವ ಪ್ರಮೋದ್ ಮಾಡುವ ಬದಲು ಪತ್ನಿ ಮೂಲಕ ಮಾಡಿಸುವ ಅಧಿಕಾರ ನೀಡಿದ್ದಾರೆಯೇ ಎಂಬ ಅನುಮಾನ ಕಾಡಿದೆ ಎಂದರು.

ಕ್ರಿಮಿನಲ್ ಪ್ರಕರಣ ದಾಖಲಾಗುವ ಮುನ್ನವೇ ಅಮಾನತು ಆದೇಶ ನೀಡಿರುವುದರಿಂದ ಅಮಾನತು ಆದೇಶ ಹಿಂಪಡೆದು ತನಿಖೆ ನಡೆಸಬೇಕು. ಕುಮಾರ್ ವಿರುದ್ಧ ಸಂಪೂರ್ಣ ತನಿಖೆಯಾಗಬೇಕು, ಆತ ಕುಡಿದಿರುವುದು ಜಿಲ್ಲಾಸ್ಪತ್ರೆ ವೈದ್ಯರೇ ದೃಢಪಡಿಸಿದ್ದು, ಆ ಬಗ್ಗೆಯೂ ತನಿಖೆಯಾಗಬೇಕು. ಪ್ರಕಾಶ್ ಎಂಬ ಪೇದೆಯ ಅಮಾನತು ಆದೇಶ 24 ಗಂಟೆಯೊಳಗೆ ಹಿಂಪಡೆಯದಿದ್ದರೆ ಎಸ್ಪಿ ಕಚೇರಿಯಲ್ಲೇ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದರು.