ಪಂಚಾಯತ್ ನಿಧಿ ದುರ್ಬಳಕೆ ವಿರುದ್ಧ ಯುಡಿಎಫ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ವ್ಯಾಪಕ ಪ್ರಮಾಣದ ಅವ್ಯವಹಾರ ನಡೆಸುವ ಮೂಲಕ ಸ್ಥಳೀಯ ಗ್ರಾಮ ಪಂಚಾಯತಿ ನಿಧಿಯನ್ನು ದುರ್ಬಳಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಜಲನಿಧಿ ಯೋಜನೆಯ ಭಾರೀ ಮೊತ್ತದ ಯೋಜನೆಯನ್ನು ಬುಡಮೇಲುಗೊಳಿಸಿ ಜನರಿಗೆ ವಂಚನೆ ನಡೆಸಿರುವುದು ಖಂಡನಾರ್ಹ ವಾಗಿದ್ದು, ಸಂಬಂಧಪಟ್ಟವರು ಜನರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು” ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ಹೇಳಿದರು.

ಯುಡಿಎಫ್ ನೇತೃತ್ವದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿಯ ಮಹತ್ವಾಕಾಂಕ್ಷೆಯ ಜಲನಿಧಿ ಯೋಜನೆಯ ಅವ್ಯವಸ್ಥೆಯ ವಿರುದ್ಧ ಬುಧವಾರ  ಹಮ್ಮಿಕೊಂಡ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. “ಪ್ರಾಕೃತಿಕ ಅಸಮತೋಲನದ ಕಾರಣ ಗ್ರಾಮೀಣ ಪ್ರದೇಶಗಳ ಸಹಿತ ಎಲ್ಲೆಡೆ ವ್ಯಾಪಕ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಇವುಗಳ ನಿವಾರಣೆಗೆ ಕಂಡುಕೊಂಡ ಜಲನಿಧಿ ಬೃಹತ್ ಯೋಜನೆಯನ್ನು ದುರ್ಬಳಕೆ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಜನರಿಗೆ ಎಸಗಿದ ವಂಚನೆಗೆ ಸ್ಪಷ್ಟ ನಿದರ್ಶನವಾಗಿದೆ. ಕೋಟ್ಯಂತರ ರೂಪಾಯಿಗಳ ಜಲನಿಧಿ ಯೋಜನೆಯ ಹಿನ್ನಡೆಗೆ ಗ್ರಾಮ ಪಂಚಾಯತಿ ಡೆಸಿದ ವ್ಯಾಪಕ ಭ್ರಷ್ಟಾಚಾರ ಕಾರ. ಜನಸಾಮಾನ್ಯರು ಶುದ್ಧ ಕುಡಿಯುವ ನೀರಿಲ್ಲದೇ ಕಂಗೆಟ್ಟಿರುವಾಗ ಶಾಶ್ವತ ಯೋಜನೆಯಾಗಿ ಜಾರಿಗೊಂಡ ಜಲನಿಧಿ ಯೋಜನೆಯ ದುರ್ಬಳಕೆ ಮಾಡಿರುವ ಗ್ರಾಮ ಪಂಚಾಯತಿ ಮೌನವಾಗಿರುವುದು ಅದರ ಭ್ರಷ್ಟಾಚಾರದ ಸಾಕ್ಷಿ. ಕೂಡಲೇ ಗ್ರಾಮ ಪಂಚಾಯತಿ ಅಧಿಕೃತರು ಜನರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಿ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು. ಕಾರ್ಯಕರ್ತರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY