ಯುವಕರಿಬ್ಬರಿಗೆ ಚೂರಿ ಇರಿತ

ನಮ್ಮ ಪ್ರತಿನಿಧಿ ವರದಿ
ಬಂಟ್ವಾಳ : ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ವಿಚಕ್ರ ವಾಹನದಲ್ಲಿ ವಾಪಾಸಾಗುತ್ತಿದ್ದ ಇಬ್ಬರು ಮುಸ್ಲಿಂ ಯುವಕರಿಗೆ ಇನ್ನೊಂದು ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಕಳ್ಳಿಗೆ ಗ್ರಾಮದ ಬೆಂಜನಪದವು ಸಮೀಪದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ
ಚೂರಿ ಇರಿತದಿಂದ ಗಾಯಗೊಂಡವರನ್ನು ಮಲ್ಲೂರು-ಬದ್ರಿಯಾ ನಗರ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಜುನೈದ್ (17) ಹಾಗೂ ಬಿ ಸಿ ರೋಡು ಸಮೀಪದ ಶಾಂತಿಅಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಸಿನಾನ್ (18) ಎಂದು ಹೆಸರಿಸಲಾಗಿದೆ. ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಸಿನಾನ್ ಹಾಗೂ ಜುನೈದ್ ಎಂಬವರು ಬೈಕಿನಲ್ಲಿ ಗುರುಪುರ ಕೈಕಂಬದ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಾಸು ಬರುತ್ತಿದ್ದಾಗ ಬೆಂಜನಪದವು ಸಮೀಪದ ಕಲ್ಪನೆ ಎಂಬಲ್ಲಿ ಇನ್ನೊಂದು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ
ದುಷ್ಕರ್ಮಿಗಳ ಕೈಯಿಂದ ಅದೇಗೋ ದ್ವಿಚಕ್ರ ವಾಹನದಲ್ಲೇ ತಪ್ಪಿಸಿಕೊಂಡು ಬಂದ ಇಬ್ಬರೂ ಕೂಡಾ ಕಲಾಯಿ ಎಂಬಲ್ಲಿಗೆ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ ಪರಿಣಾಮ ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ
ಘಟನೆಯ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವಿವಿಧ ಗಾಳಿ ಸುದ್ದಿಗಳಾಗಿ ಕ್ಷಣ ಮಾತ್ರದಲ್ಲಿ ಹರಿದಾಡಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳ ತಾಲೂಕಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ ಆರ್  ವೃತ್ತ ನಿರೀಕ್ಷಕ ಬಿ ಕೆ ಮಂಜಯ್ಯ  ನಗರ ಠಾಣಾಧಿಕಾರಿ ನಂದಕುಮಾರ್ ಸಹಿತ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಮುನ್ನಚ್ಚರಿಕೆ ಕ್ರಮವಾಗಿ ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ  ಗಾಯಾಳು ಯುವಕರ ಮಾಹಿತಿ ಮೇರೆಗೆ ತನಿಖೆ ಮುಂದುವರಿದಿದ್ದು  ಘಟನೆಗೆ ಕಾರಣವಾಗಿರುವ ದುಷ್ಕರ್ಮಿಗಳ ಜಾಡನ್ನು ಪತ್ತೆ ಹಚ್ಚಲಾಗಿದ್ದು  ಶೀಘ್ರ ಬಂಧಿಸುವುದಾಗಿ ಡಿವೈಎಸ್ಪಿ ರವೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಪೊಲೀಸ್ ವೈಫಲ್ಯ
ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿರುವ ಬಂಟ್ವಾಳದಲ್ಲಿ ಪದೇ ಪದೇ ಅಹಿತಕರ ಘಟನೆಗಳು ಮುಂದುವರಿಯಲು ಪೊಲೀಸ್ ವೈಫಲ್ಯವೇ ಪ್ರಮುಖ ಕಾರಣ ಎಂದು ಸಾರ್ವಜನಿಕರು ಬೊಟ್ಟು ಮಾಡುತ್ತಾರೆ ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾಗುವ ಕೋಮುವಾದಿ ಸಂಘಟನೆಗಳಿಗೆ ಸೇರಿದ ಪ್ರಮುಖರೊಂದಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತೀವ ಸಲುಗೆ ಬೆಳೆಸಿಕೊಳ್ಳುವುದು ಮಾತ್ರವಲ್ಲದೆ  ಠಾಣೆಗಳಲ್ಲಿ ನಡೆಯುವ ಶಾಂತಿ ಸಭೆಗಳಂತಹ ಮಹತ್ವದ ಸಭೆಗಳಿಗೆ ಇಂತಹ ಅಪರಾಧಿ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವ ಸಂಘಟನೆಗಳ ಪ್ರಮುಖರನ್ನೇ ಕರೆಸಿ ರಾಜಮರ್ಯಾದೆ ನೀಡುತ್ತಾರೆ ಎಂದು ಆರೋಪಿಸುವ ಸಾರ್ವಜನಿಕರು ಕೆಲ ಸಂದರ್ಭಗಳಲ್ಲಿ ರಾಜಿ ಪಂಚಾಯಿತಿಕೆ ಹೆಸರಿನಲ್ಲಿಯೂ ಇಂತಹ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳೇ ಪೊಲೀಸರೊಂದಿಗೆ ವ್ಯವಹಾರ ಕುದುರಿಸಿ ಪಂಚಾಯಿತಿಕೆ ನೇತೃತ್ವ ವಹಿಸುವ ಪ್ರಕರಣಗಳೂ ಅತಿಯಾಗಿ ನಡೆಯುತ್ತಿದೆ ಎನ್ನುತ್ತಾರೆ  ಈ ಬಗ್ಗೆ ಈಗಾಗಲೇ ಹಲವು ಬಾರಿ ಜಿಲ್ಲಾ ಎಸ್ಪಿ ಗಮನಕ್ಕೆ ತರಲಾಗಿದ್ದರೂ ಯಾವುದೇ ಸ್ಪಂದನೆ ಕಂಡು ಬರುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ