ಪಾಳು ಕಟ್ಟಡದ ಮೇಲೆ ಜೋಡಿ ಶವ

ಶವ ಪರಿಶೀಲಿಸಿದ ಪೊಲೀಸ್

ಆತ್ಮಹತ್ಯೆಯೋ ? ಕೊಲೆಯೋ ?

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿರ್ಮಾಣ ಹಂತದ ಪಾಳು ಕಟ್ಟಡದ ಮೇಲ್ಭಾಗದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಹಿಂದೆ ನಿಗೂಢತೆ ಸೃಷ್ಟಿಯಾಗಿದೆ.

ನಗರದ ಕಂಕನಾಡಿ ಪಂಪ್ವೆಲ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸುಮಾರು 40 ವರ್ಷ ಪ್ರಾಯದ ಇಬ್ಬರು ವ್ಯಕ್ತಿಗಳ ಶವ ಪತ್ತೆಯಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಯಾರಾದರೂ ಕೊಲೆ ಮಾಡಿದ್ದಾರೆಯೇ ಎಂಬ ಮಾಹಿತಿ ತನಿಖೆಯಿಂದ ಹೊರಬರಬೇಕಾಗಿದೆ. ಮೃತ ದೇಹದ ಮೇಲೆ ಎಲ್ಲೂ ಗಾಯಗಳು ಕಂಡು ಬಂದಿಲ್ಲ. ಕೃತ್ಯ ನಡೆದ ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕುಡಿತದ ಮತ್ತಿನಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡು ಹತ್ಯೆ ಮಾಡಿಕೊಂಡರೇ ಅಥವಾ ಇತರ ಯಾವುದಾದರೂ ತಂಡ ಈ ಕೃತ್ಯ ಎಸಗಿ ಪರಾರಿಯಾಗಿದೆಯೇ ಎಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಎರಡೂ ಶವ ಅಂಗಾತ ಮಲಗಿದ ಸ್ಥಿತಿಯಲ್ಲಿ ಒಂದರ ಸಮೀಪ ಇನ್ನೊಂದಿದೆ. ಪಕ್ಕದಲ್ಲೇ ನೀರಿನ ಬಾಟ್ಲಿ ಕೂಡಾ ಪತ್ತೆಯಾಗಿದೆ. ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.