ವಿದ್ಯುತ್ ತಂತಿ ತಾಗಿ ಎರಡು ಹೆಣ್ಣಾನೆಗಳ ದಾರುಣ ಸಾವು

ಮಡಿಕೇರಿ : ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕನ್ನಂಗಳ ಎಂಬಲ್ಲಿ ಬುಧವಾರ ಸಜೀವ ವಿದ್ಯುತ್ ತಂತಿ ತಾಗಿ ಎರಡು ಹೆಣ್ಣಾನೆಗಳು ದಾರುಣ ಸಾವಿಗೀಡಾಗಿವೆ. ಈ ಆನೆಗಳು ಕಾಡಿನಿಂದ ಹೊರಬಂದು ಆಹಾರ ಅರಸುತ್ತಿದ್ದಾಗ ಘಟನೆ ನಡೆದಿದೆ. ಆನೆಗಳ ವಯಸ್ಸು 40 ಹಾಗೂ 26 ಆಗಿರಬಹುದೆಂದು ಅಂದಾಜಿಸಲಾಗಿದೆ. ವಿರಾಜಪೇಟೆ ಅರಣ್ಯಾಧಿಕಾರಿ ಎಂ ಕೆ ದೇವಯ್ಯ ಮತ್ತವರ ತಂಡವು ಗ್ರಾಮಕ್ಕೆ ನುಗ್ಗಿ ತೋಟವೊಂದನ್ನು ಹಾನಿಗೊಳಿಸುತ್ತಿದ್ದ ಐದು ಆನೆಗಳ ಹಿಂಡೊಂದನ್ನು ಮತ್ತೆ ಕಾಡಿನತ್ತ  ಓಡಿಸುತ್ತಿದ್ದಾಗ ನಿರ್ಜನ ಜ್ಯೋತಿಲ್ಯಾಂಡ್ ಎಸ್ಟೇಟ್ ಪ್ರದೇಶದಲ್ಲಿ ಈ ಎರಡು ಆನೆಗಳು ಸತ್ತು ಬಿದ್ದಿರುವುದನ್ನು ಗಮನಿಸಿತ್ತು. ವಿದ್ಯುತ್ ಇಲಾಖೆಯ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯಾಧಿಕಾರಿ ದೇವಯ್ಯ ಹೇಳಿದ್ದಾರೆ.