ಕುಮಾರಧಾರಾ ನದಿಯಲ್ಲಿ ಇಬ್ಬರು ನೀರುಪಾಲು

ನೀರುಪಾಲಾದವರ ಹುಡುಕಲು ನದಿ ಪಕ್ಕ ಸೇರಿದ ಜನತೆ
  • ತೆಪ್ಪ ದುರಂತ
  • ಮುಂದುವರಿದ ಹುಡುಕಾಟ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಇಲ್ಲಿನ ಕುಮಾರಧಾರಾ ನದಿಯಲ್ಲಿ ನಡೆದ ತೆಪ್ಪ ದುರಂತವೊಂದರಲ್ಲಿ ಇಬ್ಬರು ನೀರುಪಾಲಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಗುಜ್ಜರ್ಮೆ ಎಂಬಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ನೀರುಪಾಲಾಗಿದ್ದರೆ, ತೆಪ್ಪವನ್ನು ನಡೆಸುತ್ತಿದ್ದ ನಾವಿಕ ಅಪಾಯದಿಂದ ಪಾರಾಗಿ ಬದುಕುಳಿದಿದ್ದಾರೆ. ನೀರುಪಾಲಾದವರಿಗೆ ತಡರಾತ್ರಿಯವರೆಗೂ ಹುಡುಕಾಟ ಮುಂದುವರಿದಿತ್ತು.

ನೀರು ಪಾಲಾದವರನ್ನು ಸುಳ್ಯ ತಾಲೂಕಿನ ಚಿಕ್ಕೋಡಿ ನಿವಾಸಿ ಗಣೇಶ್ (60) ಮತ್ತು ಪುತ್ತೂರಿನ ರಾಮಕುಂಜ ಗ್ರಾಮ ಕುಂಞಣ್ಣ ಗೌಡ (70) ಎಂದು ಗುರುತಿಸಲಾಗಿದೆ. ತೆಪ್ಪವನ್ನು ನಡೆಸುತ್ತಿದ್ದ ನಾವಿಕ ಗುಜ್ಜರ್ಮೆ ನಿವಾಸಿ ನಾರಾಯಣ ಆಲಿಯಾಸ ನೋಣ ಈಜಿ ದಡ ಸೇರಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಇಲ್ಲಿನ ಇತಿಹಾಸ ಪ್ರಸಿದ್ಧವಾಗಿರುವ ಅಲಂಕಾರು ಗ್ರಾಮದ ಬುಡೇರಿಯಾ ದೈವಸ್ಥಾನದಲ್ಲಿ ನೇಮೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಂಞಣ್ಣ ಹಾಗೂ ಗಣೇಶ್ ಅವರಿಬ್ಬರೂ ತೆಪ್ಪದ ಮೂಲಕ ಹೊಳೆ ದಾಟಿ ಅಲ್ಲಿಗೆ ತೆರಳುತ್ತಿದ್ದಾಗ ತೆಪ್ಪ ಉರುಳಿ ಇವರು ನೀರಿನಲ್ಲಿ ಮುಳುಗಿದ್ದರು. ಕುಂಞಣ್ಣರ ಮಗಳನ್ನು ಚಾರ್ವಾಕ ಗ್ರಾಮದ ಗುಜ್ಜರ್ಮೆಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳ ಪತಿ ಮೃತಪಟ್ಟಿರುವ ಕಾರಣದಿಂದಾಗಿ ಅವರು ತನ್ನ ಪುತ್ರಿಯ ಮನೆಯಲ್ಲಿಯೇ ವಾಸಮಾಡಿಕೊಂಡಿದ್ದರು.

ಮೃತಪಟ್ಟಿರುವ ಗಣೇಶ್ ಮೂಲತಃ ತಮಿಳುನಾಡಿನ ನಿವಾಸಿಯಾಗಿದ್ದು, ಗುಜ್ಜರ್ಮೆ ಪ್ರಸಾದ್ ಜೋಶಿ ಎಂಬವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ಬುಡೇರಿಯಾ ದೈವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ನಾಪತ್ತೆಯಾದವರ ಪತ್ತೆಗೆ ಪುತ್ತೂರು ಅಗ್ನಿ ಶಾಮಕ ದಳದವರು ಆಗಮಿಸಿ ತಡರಾತ್ರಿಯವರೆಗೂ ಹುಡುಕಾಟ ನಡೆಸಿದರು. ಆದರೆ ಸುಳಿವು ಲಭ್ಯವಾಗಿಲ್ಲ. ಸ್ಥಳೀಯ ಈಜುಪಟುಗಳಾದ ಕುಶಾಲಪ್ಪ ಉದಲಡ್ಕ, ಶೇಖರ್ ಉದಲಡ್ಕ, ಬಾಲಕೃಷ್ಣ ಬೀರೋಳಿಗೆ, ಪ್ರಶಾಂತ್ ಓಡದಕೆರೆ ಮೊದಲಾದ ಈಜು ಪಟುಗಳು ನೀರಿನಲ್ಲಿ ತಡರಾತ್ರಿಯವರೆಗೂ ಹುಡುಕಾಡಿದ್ದಾರೆ.