ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ
ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಏಳು ಜನ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಪ್ರಯಾಣಿಕರಾದ ಕಡಂಬು ಬದಿಯಾರು ನಿವಾಸಿ ಕೆಲದಿನಗಳ ಹಿಂದಷ್ಟೆ ವಿದೇಶದಿಂದ ಬಂದಿದ್ದ ಸುಲೈಮಾನ್ ಹಾಜಿ (60) ಮತ್ತು ಅವರ ಪುತ್ರಿಯ 3 ತಿಂಗಳ ಮಗು ಶಹಜಾನ್ ಎಂಬಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಚಲಾಯಿಸುತ್ತಿದ್ದ ಮಹಮ್ಮದ್ (32) ಪ್ರಯಾಣಿಕರಾದ ಸಲ್ಮಾ (45), ಝೊಹರಾ (29), ನಿಹಾ (7), ಸೈಫಾ (3ತಿಂಗಳು), ನಸೀರಾ (22) ಮತ್ತು ಬೀಪಾತುಮ್ಮಾ (35) ಗಾಯಗೊಂಡಿದ್ದು ಪುತ್ತೂರು ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಸುಲೈಮಾನ್ ಹಾಜಿಯವರ ಪುತ್ರಿಯ ಮಗುವಿನ ಹುಟ್ಟುಹಬ್ಬ ಸಮಾರಂಭಕ್ಕಾಗಿ ಪುಣಚಕ್ಕೆ ಹೋಗುತ್ತಿರುವ ಸಂದರ್ಭ ಉಕ್ಕುಡದಲ್ಲಿ ಅಪಘಾತ ಸಂಭವಿಸಿದೆ. ಇತರ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.