ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ಬಂಧಿತ ನಿಯಾಝ್ ಮತ್ತು ಶಮೀರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಬೊಕ್ಕಪಟ್ಣ ಬಳಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇವರು ಹಲವು ಕಡೆಗಳಲ್ಲಿ ಕಳವು ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ಬಂಧಿತರನ್ನು ಉಳ್ಳಾಲ ನಿವಾಸಿ ನಿಯಾಝ್ (26) ಹಾಗೂ ತೊಕ್ಕೊಟ್ಟು ಸೇವಂತಿಗುಡ್ಡೆ ನಿವಾಸಿ ಶಮೀರ್ (36) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ತಲಾ 12 ಗ್ರಾಂ ತೂಕದ 2 ಕರಿಮಣಿ ಸರ, ಒಂದು ಬೈಕ್, ನಾಲ್ಕು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಇದರ ಮೌಲ್ಯ 1,11,000 ರೂ ಎಂದು ಅಂದಾಜಿಸಲಾಗಿದೆ.

ಸರಗಳ್ಳತನ ಮತ್ತು ಕಳ್ಳತನದ ಪ್ರಕರಣದ ತನಿಖೆ ನಡೆಸಲೆಂದು ನಿಯೋಜಿತರಾಗಿರುವ ಬರ್ಕೆ ಅಪರಾಧ ವಿಭಾಗದ ಎಸೈ ನರೇಂದ್ರ ಮತ್ತು ರೈಲ್ವೇ ರಕ್ಷಣಾ ದಳದ ಎಸೈ ಭರತ್ ಮತ್ತು ಸಿಬ್ಬಂದಿ ಬುಧವಾರ ಬೊಕ್ಕಪಟ್ಣ ಚರ್ಚ್ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಇವರ ಕಳವು ಕೃತ್ಯ ಬೆಳಕಿಗೆ ಬಂದಿದೆ.

ವರ್ಷದ ಹಿಂದೆ ಬೈಕಿನಲ್ಲಿ ತೆರಳುತ್ತಿದ್ದಾಗ ಗಾಂಧಿನಗರ ಕ್ರಾಸ್ ರಸ್ತೆಯಲ್ಲಿ ಒಂಟಿ ಮಹಿಳೆಯ ಚಿನ್ನದ ಕರಿಮಣಿ ಮತ್ತು ರೈಲ್ವೇ ಸ್ಟೇಶನಿನಲ್ಲಿ ಚಲಿಸುವ ರೈಲಿನಿಂದ ಮಹಿಳೆ ಕರಿಮಣಿ ಸರ ಕಸಿದು ಪರಾರಿಯಾಗಿದ್ದರು ಎನ್ನುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.