8ನೇ ಪರಿಚ್ಛೇದದಲ್ಲಿ ತುಳು ಸೇರಿಸಲು ಟ್ವಿಟರ್ ಅಭಿಯಾನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಿ ಅದಕ್ಕೆ ಸೂಕ್ತ ಮಾನ್ಯತೆ ನೀಡಬೇಕೆಂಬ ಬೇಡಿಕೆಯೊಂದಿಗೆ  ತುಳುನಾಡಿನ ಯುವಕರು “ಟ್ವೀಟ್ ತುಳುನಾಡ್” ಟ್ವಿಟ್ಟರ್ ಅಭಿಯಾನವೊಂದನ್ನು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆತನಕ ಹಮ್ಮಿಕೊಳ್ಳಲಿದ್ದಾರೆ.  ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಈ ವಿಚಾರದಲ್ಲಿ ಎಚ್ಚರಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದೇ ಈ  ಅಭಿಯಾನದ ಉದ್ದೇಶವಾಗಿದೆ.

“ತುಳು ಭಾಷೆಗೆ ಸೂಕ್ತ ಗೌರವ ಮತ್ತು ಸ್ಥಾನಮಾನ ದೊರೆಯಬೇಕು. ಇದಕ್ಕಾಗಿ ನಾವು ಸಾಮಾಜಿಕ ಜಾಲತಾಣದ ಮೂಲಕ ಪ್ರಯತ್ನಿಸಲಿದ್ದೇವೆ. ನಮ್ಮ ಟ್ವೀಟುಗಳಿಗೆ ಸಚಿವರು ಮತ್ತು ಇತರ ನಾಯಕರು ಸ್ಪಂದಿಸುತ್ತಾರೆಂಬ ಭರವಸೆಯಿದೆ. ಈ ಟ್ವೀಟ್ ಅಭಿಯಾನವನ್ನು ಜನಾಂದೋಲನವಾಗಿಸುವ ಆಶಯ ನಮ್ಮದು. ತುಳು ಭಾಷಿಗರು ಮತ್ತು ತುಳು ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಈ ಅಭಿಯಾನವನ್ನು ಬೆಂಬಲಿಸಬೇಕು” ಎಂದು ಜೈ ತುಳುನಾಡು ಅಧ್ಯಕ್ಷ ಅಶ್ವಥ್ ತುಳುವ ಹೇಳುತ್ತಾರೆ.

ಈ ಅಭಿಯಾನದ ಹ್ಯಾಶ್ ಟ್ಯಾಗ್ #ತುಳುಟು8ತ್‍ಶೆಡ್ಯೂಲ್” ಆಗಿರುತ್ತದೆ. ಭಾಗವಹಿಸುವವರು ಪ್ರಧಾನಿ, ಕರ್ನಾಟಕ, ಕೇರಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟ್ವೀಟ್ ಮಾಡಬೇಕು. ಸುಮಾರು 20,000 ಮಂದಿ ಈ ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.