ತುಳು ಕಿರುಚಿತ್ರ `ಪರೋಕ್ಷ್’ : ಜಿಲ್ಲೆಯ ಜನರಲ್ಲಿ ಬೇರೂರಿರುವ ಮೂಢನಂಬಿಕೆಯ ಅನಾವರಣ

ಬಿಡುಗಡೆಯಾದ ಮೊದಲ ದಿನದಂದೇ ಯೂಟ್ಯೂಬಿನಲ್ಲಿ 30,000 ಹಿಟ್ಸ್

ದಕ್ಷಿಣ ಕನ್ನಡ ಮೂಲದ ಗಣೇಶ್ ಶೆಟ್ಟಿ ಅವರ ನಿರ್ದೇಶನದ ಚೊಚ್ಚಲ ತುಳು ಕಿರು ಚಿತ್ರ `ಪರೋಕ್ಷ್’ ಮಂಗಳವಾರ ದೃಶ್ಯಂ ಫಿಲ್ಮ್ಸ್ ಲಾಂಛನದಲ್ಲಿ ಬಿಡುಗಡೆಗೊಂಡ ಕೇವಲ 24 ಗಂಟೆಗಳಲ್ಲಿ 30,000 ಹಿಟ್ಸ್ ಕಂಡಿದೆ. ನಿರೀಕ್ಷಿಸಿದಂತೆ ಅದು ನಿರ್ದೇಶಕ ಗಣೇಶ್ ಶೆಟ್ಟಿಯವರ ಪಾಲಿಗೆ ಬಹಳ ಪ್ರೋತ್ಸಾಹದಾಯಕವಾಗಿಯೂ ಪರಿಣಮಿಸಿದೆ.

ಅಂದ ಹಾಗೆ, ಈ ಚಿತ್ರ ತಮ್ಮ ತವರು ಜಿಲ್ಲೆ ದಕ್ಷಿಣ ಕನ್ನಡದ ಜನತೆಗೆ ಅರ್ಪಣೆ ಎಂದು ಶೆಟ್ಟಿ ಹೇಳುತ್ತಾರೆ.  ಬುದ್ಧಿವಂತರ ಜಿಲ್ಲೆಯ ಜನರು ಕೆಲವೊಮ್ಮೆ ಮೂಢನಂಬಿಕೆಗಳಿಗೆ ಬಲಿಯಾಗಿ  ಹೇಗೆ ಕಷ್ಟಕ್ಕೀಡಾಗುತ್ತಾರೆ ಎಂಬುದನ್ನು ಈ ನೈಜಕಥೆಯಾಧರಿತ ಕಿರುಚಿತ್ರ ಕಣ್ಣಿಗೆ ಕಟ್ಟುವಂತೆ ನಮ್ಮ ಮುಂದಿಡುತ್ತದೆ.

ಕುಂದಾಪುರದಲ್ಲಿ  2015ರ ಜುಲೈ ತಿಂಗಳಲ್ಲಿ ನಡೆದ ಒಂದು ಘಟನೆಯೇ ಈ ಚಿತ್ರದ ಕಥಾ ವಸ್ತು. ತೆಂಗಿನ ಮರದ ಮೇಲಿನಿಂದ ಮಗುವೊಂದು ಜೋರಾಗಿ ನಗುವ ಸದ್ದು ಒಂದು ಕುಟುಂಬದ ನಿದ್ದೆಗೆಡಿಸಿದ ಘಟನೆ ಇದಾಗಿದೆ.  ಪ್ರತಿ ಸಂಜೆ ಮಗುವೊಂದು ವಿಚಿತ್ರ ರೀತಿಯಲ್ಲಿ ನಗುವುದನ್ನು ತೆಂಗಿನ ಮರದ ಮೇಲಿನಿಂದ ಕೇಳಲಾರಂಭಿಸಿದ  ಕುಟುಂಬ ಭಯಗೊಂಡು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿ ಇದಕ್ಕೆ ಪರಿಹಾರ ಯಾಚಿಸುತ್ತದೆÉ. ಇದು ದೆವ್ವ ಪಿಶಾಚಿಗಳ ಕಾಟವಾಗಿರಬಹುದೆಂದು ಅವರ ಬಲವಾದ ನಂಬಿಕೆಯಾಗಿತ್ತು. ಆದರೆ ಹಲವಾರು ಪೂಜೆಗಳ ಹೊರತಾಗಿಯೂ ತೆಂಗಿನ ಮರದ ಮೇಲಿನಿಂದ ಮಗುವಿನ ನಗುವಿನ ಸದ್ದು ನಿಲ್ಲದೇ ಇದ್ದಾಗ ಕೊನೆಗೆ ತೆಂಗಿನ ಮರವೇರುವವನನ್ನು ಕರೆಸಿ ತೆಂಗಿನ ಮರ ಹತ್ತಿಸಿದಾಗಲಷ್ಟೇ ಆತ ಅಲ್ಲಿ ತನ್ನ ಮೊಬೈಲ್ ಫೋನನ್ನು ಬಿಟ್ಟಿದ್ದು ನೆನಪಾಗಿತ್ತು. ಆ ಮೊಬೈಲ್ ಫೋನಿನ ರಿಂಗ್ ಟೋನ್ ಮಗು ನಗುವ ಸದ್ದಾಗಿದ್ದರಿಂದ ಆತ ತನ್ನ ಮೊಬೈಲ್ ಎಲ್ಲಿದೆಯೆಂದು ತಿಳಿಯುವ ಸಲುವಾಗಿ ಅದಕ್ಕೆ  ಕರೆ ಮಾಡಿದಾಗಲೆಲ್ಲಾ ಮಗು ನಗುವ ಸದ್ದು ಕೇಳಿ ಕುಟುಂಬ ಬೆದರುತ್ತಿತ್ತು.

ಆದರೆ ಗಣೇಶ್ ಶೆಟ್ಟಿ ನಿರ್ದೇಶನದ ಈ 12 ನಿಮಿಷ ಅವಧಿಯ ಕಿರುಚಿತ್ರದಲ್ಲಿ ಮಗುವಿನ ನಗುವಿನ ಸದ್ದಿನ ಬದಲು ಮಗು ಅಳುವ ಸದ್ದು ಕೇಳಿಸುತ್ತದೆ. “ಚಿತ್ರಕ್ಕೆ ನೈಜತೆ ತುಂಬಿಸಲೆಂದೇ ಮಗುವಿನ ಅಳುವಿನ ಸದ್ದು ಕೇಳಿಸಲಾಗಿದೆ” ಎನ್ನುತ್ತಾರೆ ಶೆಟ್ಟಿ. ಬೆಳುವಾಯಿ ಸಮೀಪದ ಕಿಲ್ಲಪುತ್ತಿಗೆಯವರಾದ ಶೆಟ್ಟಿ ತಮಗೆ ಈ ಚಿತ್ರ ಪೂರ್ತಿಗೊಳಿಸಲು ಆರು ತಿಂಗಳು ಬೇಕಾಯಿತು ಎಂದು ಹೇಳುತ್ತಾರೆ. ಮನೀಶ್ ಮುಂದ್ರಾರ ಮೋಷನ್ ಪಿಕ್ಚರ್ ಸ್ಟುಡಿಯೋ-ದೃಶ್ಯಂ ಫಿಲ್ಮ್ಸ್ ಈ ಚಿತ್ರ ಬಿಡುಗಡೆಗೊಳಿಸಿದೆ.

ಚಿತ್ರದಲ್ಲಿ ಅಮಿತ್ ಸಿಯಾಲ್ ಮತ್ತು ಪೂಜಾ ಉಪಾಸನಿ  ನಟಿಸಿದ್ದಾರೆ ಹಾಗೂ  ಚಿತ್ರದ ಹೆಚ್ಚಿನ ಭಾಗಗಳನ್ನು ಶೆಟ್ಟಿಯ ಮನೆಯಲ್ಲೇ ಚಿತ್ರೀಕರಿಸಲಾಗಿದೆ.

ಟೀ-ಬಾಯ್ ಆಗಿದ್ದವ ಈಗ ಚಿತ್ರ ನಿರ್ದೇಶಕ

ಆರಂಭದಲ್ಲಿ ಮುಂಬೈಯಲ್ಲಿ ಆಡ್ ಲ್ಯಾಬ್ಸ್ ಸಂಸ್ಥೆಯಲ್ಲಿ ಟೀ-ಬಾಯ್ ಆಗಿದ್ದ ಗಣೇಶ್ ಶೆಟ್ಟಿ ಮುಂದೆ ರಾತ್ರಿ ಶಾಲೆಯಲ್ಲಿ ಓದಿ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮ ಅವರ ಆಫೀಸ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿದ್ದರು. ಈ ಕಂಪೆನಿಯಲ್ಲಿ ಬಹಳಷ್ಟು ಯೋಜನೆಗಳಲ್ಲಿ ದುಡಿದ ಅವರು ಒಂದು ಯೋಜನೆ ಯಶಸ್ವಿಯಾಗದೇ ಇದ್ದಾಗ ನಿರಾಸೆಯಿಂದ  ಹುಟ್ಟೂರಿಗೆ ಮರಳಿ ಕೃಷಿಯಲ್ಲಿ ತೊಡಗಿದ್ದರು. ಕೆಲ ಸಮಯದ ಹಿಂದೆ ಅವರ ಒಬ್ಬರು ಸ್ನೇಹಿತರ ಒತ್ತಾಸೆಯ ಮೇರೆಗೆ ಆರ್ ಎಂ ಪಿಕ್ಚರ್ ಕಂಪೆನಿಗೆ ಸೇರಿದ್ದರು ಶೆಟ್ಟಿ. ಅಂದಿನಿಂದ ಹಿಂದಿರುಗಿ ನೋಡುವ ಪ್ರಮೇಯವೇ ಅವರಿಗಿರಲಿಲ್ಲ. ಹಲವಾರು ಯೊಜನೆಗಳಲ್ಲಿ ಕೈಯ್ಯಾಡಿಸಿದ ಅವರು ಪ್ರಶಸ್ತಿ ವಿಜೇತ ಚಿತ್ರ `ಬುಧಿಯಾ ಸಿಂಗ್ : ಬಾರ್ನ್ ಟು ರನ್’ ಚಿತ್ರಕ್ಕೂ ಕೆಲಸ ಮಾಡಿದ್ದರು.