ನಾಳೆ ತುಳು ಚಿತ್ರ `ಚ್ಯಾಪ್ಟರ್’ ಬಿಡುಗಡೆ

ಮಂಗಳೂರು : ಎಲ್ ವಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ತುಳು ಚಿತ್ರ `ಚ್ಯಾಪ್ಟರ್’ ನಾಳೆ ಎಪ್ರಿಲ್ 7ರಂದು ಬಿಡುಗಡೆಯಾಗಲಿದೆ. ಹಲವಾರು ಕನ್ನಡ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸಿರುವ ಮೋಹನ್ ಭಟ್ಕಳ್ ಈ ತುಳು ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ತುಳು ಚಿತ್ರೋದ್ಯಮದ ಇತಿಹಾಸದಲ್ಲಿ ಹೊಸ ಪುಟ ತೆರೆಯಲಿದೆ ಎಂದು ಅವರು ಹೇಳಿದ್ದಾರೆ.

ಚಿತ್ರವನ್ನು ಮಂಗಳೂರು, ಉಡುಪಿ, ಆಗುಂಬೆ, ಮರವಂತೆ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ  ಸುರೇಂದ್ರನಾಥ ಸಂಗೀತ ಸಂಯೋಜಿಸಿದ್ದಾರೆ. ಲೋಕು ಕುಡ್ಲ ಮತ್ತು ಕಿಶೋರ್ ಮೂಡಬಿದ್ರೆ ಪದ್ಯಗಳನ್ನು ಬರೆದಿದ್ದಾರೆ.

ಕನ್ನಡ, ಹಿಂದಿ  ಚಿತ್ರ ಪೈಪೋಟಿ

“ತುಳು ಚಿತ್ರಗಳಿಗೆ ಕನ್ನಡ ಮತ್ತು ಹಿಂದಿ ಚಿತ್ರಗಳಿಂದ ಪೈಪೋಟಿ ಎದುರಾಗಿದೆ. ಚಿತ್ರಮಂದಿರಗಳು ತುಳು ಚಿತ್ರ ಪ್ರದರ್ಶನಕ್ಕೆ ಒಪ್ಪಿಕೊಂಡಿದ್ದರೂ ಒಂದೇ ವಾರದಲ್ಲಿ ಚಿತ್ರಗಳು ಅನಾಥವಾಗಿ ಬಿಡುತ್ತವೆ.

ಇತರ ಭಾಷೆಯ ಚಿತ್ರಗಳು ತುಳು ಚಿತ್ರದ ಮೇಲೆ ಸವಾರಿ ಮಾಡುತ್ತಿವೆ. ಹಲವು ಚಿತ್ರ ನಿರ್ಮಾಪಕರು ಈ ಅನುಭವವನ್ನು ಕಂಡಿದ್ದಾರೆ. ಹಾಗಾಗಿ ತುಳು ಚಿತ್ರಗಳು ಯಶಸ್ಸನ್ನು ಗಳಿಸಲು ವಿಫಲವಾಗುತ್ತಿವೆ” ಎಂದು ಮೋಹನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ  ಹೇಳಿದ್ದಾರೆ.