ತುಳು ಅಕಾಡೆಮಿ ನೆನೆಗುದಿಗೆ

ತುಳುಭವನ ನಿರ್ಮಾಣಕ್ಕೆ ನಿಗದಿಯಾದ ಹೊಸಗಂಡಿ ಕಡಂಬಾರು ಬಳಿಯ ಸ್ಥಳ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತುಳು ಜಾನಪದ ಸಂಸ್ಕøತಿಯನ್ನು ಚಾಲ್ತಿಯಲ್ಲಿಡುವ ಆಶಯದಿಂದ ಪ್ರಾರಂಭವಾದ ತುಳು ಅಕಾಡೆಮಿ ಇಂದು ಯಾವುದೇ ಕಾರ್ಯಚಟುವಟಿಕೆ ನಡೆಸದೆ ನಿರ್ಜೀವ ಸ್ಥಿತಿಗೆ ಬಂದು ನಿಂತಿದೆ.

ಕೇರಳ ರಾಜ್ಯದಲ್ಲಿ ತುಳು ಭಾಷೆ, ಸಂಸ್ಕøತಿಯ ಉತ್ತೇಜನಕ್ಕಾಗಿ ಕೇರಳ ತುಳು ಅಕಾಡೆಮಿಯ ವಿದ್ಯುಕ್ತ ಆರಂಭ 2007 ಸೆಪ್ಟಂಬರಿನಲ್ಲಿ ನಡೆಯಿತು. ರಾಜ್ಯದ ಅಂದಿನ ಮುಖ್ಯಮಂತ್ರಿ ವಿ ಎಸ್ ಅಚ್ಚುತಾನಂದನ್ ಅಕಾಡೆಮಿಯ ಉದ್ಘಾಟನೆ ಮಾಡಿದ್ದು, ಗಡಿನಾಡ ಮಂದಿ ಮರೆಯಲಾರದ ಕ್ಷಣ. ಅಂದು ಮಂಜೇಶ್ವರ ಹೊಸಂಗಡಿಯ ಕಡಂಬಾರು ಗ್ರಾಮದ ದುರ್ಗಿಪ್ಪಳ್ಳ ಎಂಬಲ್ಲಿ ತುಳುಭವನ ನಿರ್ಮಾಣಕ್ಕೆ ಜಾಗವನ್ನು ಗೊತ್ತುಪಡಿಸಲಾಗಿತ್ತು.

ಬಹುಭಾಷಾ ಸಂಗಮವಾದ ಕಾಸರಗೋಡು ಜಿಲ್ಲೆಯಲ್ಲಿ ಬಹು ಸಂಖ್ಯೆಯ ಮಂದಿ ತುಳು ಭಾಷಿಗರಿದ್ದಾರೆ. ಅತಿ ಮುಖ್ಯ ಸಂವಹನ ಭಾಷೆಯಾಗಿ ತುಳು ಇಂದು ಎಲ್ಲರನ್ನು ಒಂದುಗೂಡಿಸುತ್ತಿದೆ. ಅಕಾಡಮಿ, ಭವನ ನಿರ್ಮಾಣಕ್ಕಾಗಿ ಇದಕ್ಕೊಂದು ಸಮಿತಿ ರಚಿಸಲಾಗಿದ್ದು, ಅದು ರಾಜಕೀಯ ಪ್ರೇರಿತವಾಗಿದೆ. ಸಮಿತಿಯಲ್ಲಿ ರಾಜಕೀಯೇತರರಾದ, ಸಾಂಸ್ಕøತಿಕ, ಸಾಹಿತ್ಯಿಕವಾಗಿ ದುಡಿದ ವ್ಯಕ್ತಿಗಳಿಗೆ ಮಣೆಹಾಕಲಿಲ್ಲ. ಸಮಿತಿಗೂ ಯಾವುದೇ ಆಶಯವಿಲ್ಲದ ಕಾರಣ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ.

ಹಿಂದಿನ ಸಮಿತಿಯಲ್ಲಿ ವಿವಿಧ ಆಯಾಮಗಳಲ್ಲಿ ದುಡಿದ ಸಾಂಸ್ಕøತಿಕ, ಸಾಹಿತ್ಯಿಕ ನೆಲೆಗಟ್ಟಿನ ಚಿಂತಕರಿದ್ದರು. ಆದರೆ ಕಳೆದ ಯುಡಿಎಫ್ ಸರಕಾರದ ಕಾಲಾವಧಿಯಲ್ಲಿ ಪುನರ್ ಸಂಘಟಿಸಲಾದ ಸಮಿತಿ ರಾಜಕೀಯ ಪ್ರೇರಿತವಾಗಿದ್ದು, ಅಧ್ಯಕ್ಷರೇ ದೂರದ ಊರಲ್ಲಿ ಸ್ವ-ವೃತ್ತಿ ನಿರತರಾದ ಕಾರಣ ಇತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಅಕಾಡೆಮಿ ಕಾರ್ಯದರ್ಶಿಯ ಅಂಬೋಣ.