ದೀಪಕ್ ಕೊಲೆಯ ಹಿಂದಿನ ಸತ್ಯ ಶೀಘ್ರ ಹೊರಬರಲಿದೆ : ಗೃಹ ಸಚಿವ

ಬೆಂಗಳೂರು : “ಪೊಲೀಸರು ಬಂಧಿಸಬೇಕೆನ್ನುವಷ್ಟರಲ್ಲಿ ತಪ್ಪಿಸಲು ಯತ್ನಿಸಿ ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಳಿದಿಬ್ಬರು ಆರೋಪಿಗಳನ್ನು ವಿಚಾರಣೆಗೆ ಗುರಿ ಪಡಿಸಿದಾಗ ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೆ ನಿಜವಾದ ಕಾರಣವೇನೆಂಬುದು ಬಹಿರಂಗವಾಗಲಿದೆ” ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಪ್ರತಿಯೊಂದು ಕೊಲೆಗೂ ಬಿಜೆಪಿ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ಸಚಿವರು, ಒಂದು ವೇಳೆ ಕೊಲೆ ವೈಯಕ್ತಿಕ ಕಾರಣಗಳಿಗಾಗಿ ನಡೆದರೂ ಬಿಜೆಪಿ ಜನರನ್ನು ಪ್ರಚೋದಿಸಲು ಯತ್ನಿಸುತ್ತದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಥ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಸಚಿವರು, ಹಲವು ಪೊಲೀಸರು ಬಹಳಷ್ಟು ಸಮಯದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆಂಬ ಆರೋಪಗಳಿಗೆ ಸ್ಪಂದಿಸಿ ಈ ಬಗ್ಗೆ ಡಿಜಿಪಿಯಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಪಿಎಫೈ ಜತೆ ಹೊಂದಾಣಿಕೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ, ಪಿಎಫೈ ತನ್ನ ಅಭ್ಯರ್ಥಿಗಳ ಮೂಲಕ ಕಾಂಗ್ರೆಸ್ ಮತವನ್ನು ಸೆಳೆಯುತ್ತಿರುವುದರಿಂದ ಅದರೊಡನೆ ಒಪ್ಪಂದದ ಪ್ರಶ್ನೆಯೆಲ್ಲಿಂದ ಬಂತು ಎಂದು ಕೇಳಿದರು.

 

 

LEAVE A REPLY