ತೀವ್ರಗೊಂಡ ಟ್ರಕ್ ಮಾಲಕರ ಮುಷ್ಕರ : ಬೇಡಿಕೆ ಪೂರೈಸಲು ನಿರಾಕರಿಸಿದ ಸರಕಾರ

ಸಾಂದರ್ಭಿಕ ಚಿತ್ರ

ಬೆಂಗಳೂರು : ವಿಮಾ ಪ್ರೀಮಿಯಂ ದರಗಳ ಏರಿಕೆ  ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದ ವಿರುದ್ಧ ಟ್ರಕ್ ಮಾಲಕರು ಹಾಗೂ ಟ್ಯಾಕ್ಸಿ ಸಂಘಟನೆಗಳ ಸದಸ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರಕಾರ ಮತ್ತು  ವಿಮಾ ನಿಯಂತ್ರಕ ಸಂಸ್ಥೆ ಐಆರ್ಡಿಎ  ಅವರ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ನಿರಾಕರಿಸಿದ್ದರಿಂದ ಟ್ರಕ್ ಮಾಲಕರು ತಮ್ಮ ಮುಷ್ಕರವನ್ನು ತೀವ್ರಗೊಳಿಸಿದ್ದಾರೆ.

ಸಂಘಟನೆಗಳ ಸದಸ್ಯರು ದಕ್ಷಿಣ ಭಾರತದಾದ್ಯಂತ ಪ್ರತಿಭಟನಾ ಸಭೆಗಳನ್ನು ನಡೆಸುತ್ತಿದ್ದು ಬೆಂಗಳೂರಿನಲ್ಲೂ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯೊಂದು ನಡೆದಿದೆ.

ಟ್ರಕ್ಕುಗಳ ಅಲಭ್ಯತೆಯಿಂದಾಗಿ ಕೃಷಿ ಉತ್ಪನ್ನಗಳನ್ನು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಸಾಗಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಜಿಲ್ಲಾಡಳಿತಗಳಿಗೆ ಅಗತ್ಯ ಬಿದ್ದಾಗಲೆಲ್ಲಾ  ಬಸ್ಸುಗಳನ್ನು ಒದಗಿಸುವಂತೆಯೂ ಸಾರಿಗೆ ನಿಗಮ ಆದೇಶಿಸಿದೆ. ಗುರುವಾರ ಬೆಂಗಳೂರಿನಲ್ಲಿ ಸುಮಾರು 20 ಕೆಎಸ್ಸಾರ್ಟಿಸಿ ಬಸ್ಸುಗಳು ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದುದು ಕಂಡುಬಂದಿದೆ.