ರಾದ್ಧಾಂತ ಸೃಷ್ಟಿಸಿದ ಟ್ರಕ್ ಚಾಲಕ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಬೆಂದೂರುವೆಲ್ ಸರ್ಕಲ್ ಬಳಿ ಟ್ರಕ್ ಚಾಲಕನೊಬ್ಬ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಕೊನೆಗೆ ಕಟ್ಟಡವೊಂದರ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆಸಿದ ಘಟನೆ ಗುರುವಾರ ನಡೆದಿದೆ. ಡಿಕ್ಕಿ ರಭಸಕ್ಕೆ ಬೈಕೊಂದು ಅಪ್ಪಚ್ಚಿಯಾಗಿದೆ.

ಟೈಲ್ಸುಗಳನ್ನು ಹೇರಿಕೊಂಡು ಹೋಗುತ್ತಿದ್ದ ಟ್ರಕ್ ಇದಾಗಿದ್ದು, ಟ್ರಕ್ ನಿಲುಗಡೆಗೊಳಿಸಿದ್ದ ಸಂದರ್ಭದಲ್ಲಿ ಹಿಂಭಾಗಕ್ಕೆ ಜಾರುವುದನ್ನು ತಪ್ಪಿಸಲು ಟ್ರಕ್ ಚಾಲಕ ಟಯರ್ ಕೆಳಭಾಗದಲ್ಲಿ ಕಲ್ಲೊಂದನ್ನು ಇಟ್ಟಿದ್ದ. ಇಳಿಜಾರು ಪ್ರದೇಶವಾಗಿದ್ದರಿಂದ ಚಾಲಕ ಕಲ್ಲನ್ನು ತೆಗೆದ ಸಂದರ್ಭ ಟ್ರಕ್ ಏಕಾಏಕಿ ಹಿಂಭಾಗಕ್ಕೆ ಸರಿಯತೊಡಗಿ ಟ್ರಕ್ ಹಿಂದೆ ಪಾರ್ಕಿಂಗ್ ಮಾಡಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ನಡುವೆ ಟ್ರಕ್ ಚಲಿಸುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿದ್ದು, ವಾಹನವನ್ನು ತಿರುಗಿಸಲಾಗದೇ ಚಾಲಕ ಕಂಗಾಲಾಗಿದ್ದಾನೆ. ಹೀಗಾಗಿ ಟ್ರಕ್ ಸಂಪೂರ್ಣ ಓರೆಯಾಗಿ ನಿಂತಿದೆ. ಅದೃಷ್ಟವಶಾತ್ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಆದರೆ ಅಡಿಗೆ ಬಿದ್ದ ಎರಡು ದ್ವಿಚಕ್ರ ವಾಹನಗಳಲ್ಲಿ ಒಂದು ಬೈಕ್ ಸಂಪೂರ್ಣ ಅಪ್ಪಚ್ಚಿಯಾಗಿದೆ. ಪೊಲೀಸರು ಕ್ರೇನ್ ಮೂಲಕ ಟ್ರಕ್ ತೆರವುಗೊಳಿಸಿದ್ದಾರೆ.