ತಲಾಖ್ : ಮತ್ತಷ್ಟು ಮುಸ್ಲಿಂ ಮಹಿಳೆಯರ ದೂರು

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಟ್ರಿಪಲ್ ತಲಾಖ್ ವ್ಯವಸ್ಥೆಯನ್ನು ನಿಷೇಧಿಸುವ ಭರವಸೆ ನೀಡಿದ್ದರು. 

ಲಖನೌ : ತರಕಾರಿ ಮಾರಾಟಗಾರನ ಮಗಳಿಂದ ಕಾನ್ಪುರ ಮೂಲದ ಉದ್ಯಮಿವರೆಗೆ, ಲಖನೌ ಮೂಲದ ಕಿಡ್ನಿ ರೋಗಿಯಿಂದ ಮೀರತದ ಕಾಲೇಜು ಅದ್ಯಾಪಕರವರೆಗೆ ತಲಾಖ್ ವಿರುದ್ಧ ಉತ್ತರಪ್ರದೇಶ ಸರ್ಕಾರಕ್ಕೆ ದೂರು ನೀಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇತ್ತೀಚೆಗೆ ಟ್ರಿಪಲ್ ತಲಾಖ್ ಹಾವಳಿಯಿಂದ ನೊಂದ ಬಹಳಷ್ಟು ಮಹಿಳೆಯರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೀಟಾ ಬಹುಗುಣ ಜೋಶಿರನ್ನು ಭೇಟಿಯಾಗಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಟ್ರಿಪಲ್ ತಲಾಖ್ ವ್ಯವಸ್ಥೆಯನ್ನು ನಿಷೇಧಿಸುವ ಭರವಸೆ ನೀಡಿದ್ದರು.  `ಈ ಮಹಿಳೆಯರು ತಮ್ಮ ಕಾಳಜಿಗಳನ್ನು ಹಂಚಿಕೊಂಡದ್ದಲ್ಲದೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ ಮತ್ತು ಬೇಡಿಕೆಗಳನ್ನೂ ಇಟ್ಟಿದ್ದಾರೆ. ಮದುವೆಗಳನ್ನು ನೋಂದಾಯಿಸುವ ಬೇಡಿಕೆಯೂ ಅದರಲ್ಲಿ ಸೇರಿದೆ. ಅವುಗಳತ್ತ ನಾವು ಗಮನಹರಿಸುತ್ತೇವೆ’ ಎಂದು ಜೋಶಿ ಹೇಳಿದ್ದಾರೆ.

ಈ ನಡುವೆ ಕಾನ್ಪುರ ಮೂಲದ ಉದ್ಯಮಿ ಮಹಿಳೆ ಆಲಿಯಾ ಸಿದ್ದಿಕಿ ಸರ್ಕಾರದಿಂದ ಭದ್ರತೆ ಬಯಸಿದ್ದಾರೆ. ಆಲಿಯಾಗೆ ಮದುವೆಯ ಮಾರನೇ ದಿನವೇ ಪತಿಗೆ ಇನ್ನೊಂದು ಮದುವೆಯಾಗಿದ್ದು ತಿಳಿದಿತ್ತು. ಹಿಂದಿನ ಪತ್ನಿಯ ಜೊತೆಗಿನ ಸಂಬಂಧದಲ್ಲಿ ಆತ ಕಾನೂನು ಹೋರಾಟದಲ್ಲಿದ್ದ. ಈ ವಿಚಾರವಾಗಿ ಪ್ರತಿಭಟಿಸಿದ ಆಲಿಯಾಗೂ ಆತ ತಲಾಖ್ ಹೇಳಿ ಮನೆಯಿಂದ ಹೊರಹಾಕಿದ್ದ. ‘ಈಗ ನನ್ನನ್ನು ಕೊಲೆ ಮಾಡುವ ಮತ್ತು ಆಸಿಡ್ ಎರಚುವ ಬೆದರಿಕೆ ಹಾಕುತ್ತಿದ್ದಾರೆ’ ಎನ್ನುತ್ತಾರೆ ಆಲಿಯಾ.

ಲಕಂಪುರದ ತರಕಾರಿ ವ್ಯಾಪಾರಿಯ ಮಗಳು 22 ವರ್ಷದ ಶಬ್ರೀನ್ ಟ್ರಿಪಲ್ ತಲಾಖ್ ನಿಷೇಧಕ್ಕೆ ಬೇಡಿಕೆ ಇಟ್ಟು ಮುಖ್ಯಮಂತ್ರಿ ಆದಿತ್ಯನಾಥರನ್ನು ಭೇಟಿಯಾಗಿದ್ದಾರೆ. ಆಕೆಯ ಪತಿ ಫೋನಿನಲ್ಲೇ ತಲಾಖ್ ಹೇಳಿದ್ದ. ಮುಖ್ಯಮಂತ್ರಿ ಶಬ್ರೀನಳಿಗೆ ನೆರವು ನೀಡುವುದಾಗಿ ಹೇಳಿದ್ದಾರೆ.

ಇಂತಹ ಬಹಳಷ್ಟು ಸಂತ್ರಸ್ತರು ರಾಜ್ಯದಲ್ಲಿದ್ದಾರೆ. ಒಬ್ಬ ಮಹಿಳೆಗೆ ಕಿಡ್ನಿ ಸಮಸ್ಯೆಯಿದೆ ಎಂದು ತಿಳಿದು ಪತಿ ತಲಾಖ್ ಹೇಳಿದ್ದ. ಅಂತಹ ಮಹಿಳೆಯರಿಗೆ ವಖ್ಫ್ ಜಾಗದಲ್ಲಿ ಆಶ್ರಯತಾಣ ತೆರೆಯಬೇಕು ಎಂದು ಆಕೆ ಬೇಡಿಕೆ ಇಟ್ಟಿದ್ದಾರೆ.

ಮೊದಲಿನಿಂದಲೇ ಬಿಜೆಪಿ ಟ್ರಿಪಲ್ ತಲಾಖ್ ವಿರುದ್ಧ ಮಾತನಾಡುತ್ತಲೇ ಬಂದಿದೆ. ಉತ್ತರ ಪ್ರದೇಶ ಚುನಾವಣೆ ಸಂದರ್ಭ ಈ ವಿಚ್ಛೇದನಾ ಪದ್ಧತಿಯನ್ನು ನಿಷೇಧಿಸುವ ಭರವಸೆಯನ್ನೂ ನೀಡಿತ್ತು. ಈ ವಿಚಾರವಾಗಿ ಬಹಳಷ್ಟು ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದರು ಎಂದು ಬಿಜೆಪಿಯ ಮುಸ್ಲಿಂ ಮೋರ್ಚಾದ ಮಾಜಿ ಅಧ್ಯಕ್ಷೆ ರುಮಾನಾ ಸಿದ್ದಿಕಿ ಹೇಳುತ್ತಾರೆ.