`ತ್ರಿವಳಿ ತಲಾಖ್ ಕ್ರೌರ್ಯದ ಪರಮಾವಧಿ ; ನಿಷೇಧ ಅಗತ್ಯ’

ವ್ಯಕ್ತಿಗತ ಕಾನೂನು ಮತ್ತು ಸಮಾನ ನಾಗರಿಕ ಸಂಹಿತೆಗೂ, ತ್ರಿವಳಿ ತಲಾಖ್ ನಿಷೇಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸದ ತಲಾಖ್ ಪದ್ಧತಿಯನ್ನು ನಿಷೇಧಿಸುವುದು ಅಗತ್ಯ ಎಂದು ಹೇಳಿದೆ.

ತ್ರಿವಳಿ ತಲಾಖ್ ಪದ್ಧತಿ ಮುಸ್ಲಿಂ ಮಹಿಳೆಯರನ್ನು ಕಾಡುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು ಈ ಕ್ರೂರ ಪದ್ಧತಿಯನ್ನು ನಿಷೇಧಿಸಲು ಮುಸ್ಲಿಂ ಸಮುದಾಯದಿಂದಲೇ ಆಗ್ರಹಗಳು ಕೇಳಿಬರುತ್ತಿವೆ.

ಮುಸ್ಲಿಂ ಸಮುದಾಯದಲ್ಲಿನ ಸಂಪ್ರದಾಯವಾದಿಗಳು ಮತ್ತು ಮೂಲಭೂತವಾದಿಗಳು ಈ ಪದ್ಧತಿಯನ್ನು ಸಮರ್ಥಿಸಲು ಸತತ ಪ್ರಯತ್ನ ನಡೆಸುತ್ತಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿ ಸುಪ್ರೀಂ ಕೋರ್ಟಿನಲ್ಲಿ ಅಸಂಬದ್ಧ ವಾದಗಳನ್ನು ಮಂಡಿಸಿದೆ. ಪತ್ನಿಯನ್ನು ಕೊಲ್ಲುವುದಕ್ಕಿಂತಲೂ ಶೀಘ್ರವಾಗಿ ತಲಾಖ್ ನೀಡುವುದು ಮಹಿಳೆಯರಿಗೆ ಉತ್ತಮ ಎಂದು ಹೇಳುವ ಮೂಲಕ ಮುಸ್ಲಿಂ ನ್ಯಾಯ ಮಂಡಲಿ ಪಿತೃಪ್ರಧಾನ ವ್ಯವಸ್ಥೆಯನ್ನು ಸಮರ್ಥಿಸಲು ಯತ್ನಿಸುತ್ತಿದ್ದು, ಮಹಿಳಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ. ವಾಸ್ತವ ಸಂಗತಿ ಎಂದರೆ ತ್ರಿವಳಿ ತಲಾಖ್ ಪದ್ಧತಿಗೂ ಮುಸ್ಲಿಂ ಧಾರ್ಮಿಕ ನಂಬಿಕೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅನೇಕ ವಿದ್ವಾಂಸರು ನಿರೂಪಿಸಿದ್ದಾರೆ. ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಕ್ರೂರ ಪದ್ಧತಿಯನ್ನು ನಿಷೇಧಿಸಲಾಗಿದೆ. ಈ ದೃಷ್ಟಿಯಿಂದಲೇ ಭಾರತದಲ್ಲಿ ಅನೇಕ ಮುಸ್ಲಿಂ ಮಹಿಳಾ ಸಂಘಟನೆಗಳು ಮತ್ತು ಬುದ್ಧಿಜೀವಿಗಳು ತಲಾಖ್ ಪದ್ಧತಿಯನ್ನು ನಿಷೇಧಿಸುವಂತೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.

ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಿದ್ದು, ತ್ರಿವಳಿ ತಲಾಖ್ ಪದ್ಧತಿ ಅಸಾಂವಿಧಾನಿಕ ಎಂದೂ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಹರಣ ಮಾಡುವ ಪದ್ಧತಿ ಎಂದೂ ತೀರ್ಪು ನೀಡಿರುವುದು ಸ್ವಾಗತಾರ್ಹವಾಗಿದೆ. ತ್ರಿವಳಿ ತಲಾಖ್ ಪದ್ಧತಿಯ ಹಿಂದಿನ ಕ್ರೌರ್ಯ ಸುಸ್ಪಷ್ಟವಾಗಿ ಗೋಚರಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಎಸ್ ಎಂ ಎಸ್ ಮೂಲಕವೂ ಸಹ ವಿಚ್ಛೇದನ ನೀಡಲಾಗಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕು ಮತ್ತು ಸಮಾನತೆಗೆ ಇದು ಧಕ್ಕೆ ಉಂಟುಮಾಡುತ್ತದೆ. ಪ್ರಜಾತಂತ್ರ ಮೌಲ್ಯಗಳಿಗೆ ಆಧಾರವಾದ ಲಿಂಗ ನ್ಯಾಯ ಮತ್ತು ಸ್ವಾಭಾವಿಕ ನ್ಯಾಯಕ್ಕೆ ಇದು ತದ್ವಿರುದ್ಧವಾಗಿದೆ. ಯಾವುದೇ ಧರ್ಮದ ಕಾನೂನು ಮಂಡಲಿ ಸಂವಿಧಾನವನ್ನು ಮೀರಲು ಸಾಧ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್, ವ್ಯಕ್ತಿಗತ ಸಾಂವಿಧಾನಿಕ ಹಕ್ಕು ಮತ್ತು ಧಾರ್ಮಿಕ ವ್ಯಕ್ತಿಗತ ಕಾನೂನುಗಳ ನಡುವೆ ಸಂಘರ್ಷ ಏರ್ಪಟ್ಟಾಗ ವ್ಯಕ್ತಿಗತ ಹಕ್ಕುಗಳಿಗೇ ಮಾನ್ಯತೆ ನೀಡಬೇಕಾಗುತ್ತದೆ ಎಂದು ಹೇಳಿದೆ.

ವ್ಯಕ್ತಿಗತ ಕಾನೂನು ಮತ್ತು ಸಮಾನ ನಾಗರಿಕ ಸಂಹಿತೆಗೂ, ತ್ರಿವಳಿ ತಲಾಖ್ ನಿಷೇಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸದ ತಲಾಖ್ ಪದ್ಧತಿಯನ್ನು ನಿಷೇಧಿಸುವುದು ಅಗತ್ಯ ಎಂದು ಹೇಳಿದೆ.

ತಲಾಖ್ ಪದ್ಧತಿ ಅಸಾಂವಿಧಾನಿಕ ಮತ್ತು ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳ ದಮನಕ್ಕೆ ಪೂರಕವಾದ ಪದ್ಧತಿ ಎಂದು ಹೇಳುವ ಮೂಲಕ ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಮಹಿಳೆಯರನ್ನು ಕಾಡುತ್ತಿರುವ ವಿವಾದಾತ್ಮಕ ವಿಚ್ಛೇದನ ಪದ್ಧತಿಯ ಕಾನೂನು ವಿರೋಧಿ ಸ್ವರೂಪವನ್ನು ಸ್ಪಷ್ಟಪಡಿಸಿದೆ. ತಲಾಖ್ ಪದ್ಧತಿಯನ್ನು ಕೆಲವು ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ತಕ್ಷಣವೇ ವಿಚ್ಛೇದನ ನೀಡುವ ಅಸ್ತ್ರವನ್ನಾಗಿ ಬಳಸುತ್ತಿದ್ದು, ಈ ಹಿಂದೆಯೂ ಹಲವಾರು ಬಾರಿ ಈ ವಿವಾದವನ್ನು ನ್ಯಾಯಾಂಗದ ಕಟಕಟೆಯಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. ಶಮೀಂ ಅರಾ ಮುಂತಾದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಹ ಈ ಪದ್ಧತಿಯ ವಿರುದ್ಧ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಈ ವಿಚಾರ ನೆನೆಗುದಿಗೆ ಬಿದ್ದಿದ್ದು, ಈಗ ಸುಪ್ರೀಂ ಕೋರ್ಟ್ ಗಂಭೀರವಾಗಿ ಈ ವಿವಾದವನ್ನು ವಿಚಾರಣೆಗೊಳಪಡಿಸಲಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪನ್ನು ನೀಡುವುದೇ ಅಲ್ಲದೆ ಒಂದು ಸಮಗ್ರ ನೀತಿಯನ್ನು ರೂಪಿಸಬೇಕಿದೆ. ಈ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟಿನ ತೀರ್ಪು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಗೆ ಪೂರಕವಾಗಿ ಪರಿಣಮಿಸಲಿದೆ. ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂದು ಕಾದುನೋಡಬೇಕಿದೆ. (ಪಿಟಿಐ ವರದಿ, ಇಂಡಿಯನ್ ಎಕ್ಸಪ್ರೆಸ್)