ನವ ವಿವಾಹಿತನ ಹತ್ಯೆಗೆ ಯತ್ನಿಸಿದ ಮೂವರ ಸೆರೆ

ಪ್ರೇಯಸಿಯ ಗಂಡನ ಕೊಲೆಗೆ ಪ್ರೇಮಿ ಸ್ಕೆಚ್ ?

ಕರಾವಳಿ ಅಲೆ  ವರದಿ

ಕಾರ್ಕಳ : ಇಲ್ಲಿನ ದುರ್ಗಾ ಗ್ರಾಮದ ನಾಗೇಶ್ ಆಚಾರ್ಯ ಎನ್ನುವವರಿಗೆ ಜನವರಿ 10ರಂದು ಕಾರ್ಕಳದ ಎಸ್ ವಿ ಟಿ ಶಾಲೆಯ ರಸ್ತೆಯ ಜ್ಯೋತಿ ಕಾಂಪ್ಲೆಕ್ಸಿನಲ್ಲಿರುವ ತನ್ನ ಅಂಗಡಿಯಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ವೇಳೆ ರಾತ್ರಿ ಚೂರಿ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ 3 ಮಂದಿ ಯುವಕರನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಶಕ್ತಿನಗರ ನಾಲ್ಯಪದವು ನಿವಾಸಿ ಸಚಿನ್ ಪೂಜಾರಿ, ಕೊಡಿಯಾಲಬೈಲ್ ಕಲಾಕುಂಜ ನಿವಾಸಿ ಶಿಶಿರ ಸುವರ್ಣ, ಕಾರ್ ಸ್ಟ್ರೀಟ್ ಹೂವಿನ ಮಾರ್ಕೆಟ್ ಬಳಿಯ ನಿವಾಸಿ ಪ್ರೀತಮ್ ಆಚಾರ್ಯ ಎನ್ನುವವರು ಬಂಧಿತ ಆರೋಪಿಗಳಾಗಿದ್ದು, ಅವರನ್ನು ಮಂಗಳೂರಿನ ನಂತೂರು ಹಾಗೂ ಕುಳಾಯಿ ಹೊನ್ನಕಟ್ಟೆ ಎಂಬಲ್ಲಿ ಬಂಧಿಸಲಾಗಿದೆ.

ಈ ಘಟನೆಗೆ ಪ್ರೇಮ ಪ್ರಕರಣವೇ ಕಾರಣವೆನ್ನಲಾಗಿದೆ. ನಾಗೇಶ್ ಆಚಾರ್ಯ ಪತ್ನಿ ಸೌಮ್ಯಳನ್ನು ಸ್ಥಳೀಯ ನಿವಾಸಿ ಅವಿನಾಶ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಆಕೆಗೆ ಬೇರೆ ವಿವಾಹವಾಗಿರುವುದಕ್ಕೆ ಆತ ಸಿಟ್ಟಿಗೆದ್ದು ತನ್ನ ಸ್ನೇಹಿತರನ್ನು ಕಳುಹಿಸಿ ನಾಗೇಶ್ ಆಚಾರ್ಯ ಅವರ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ದುರ್ಗ ಗ್ರಾಮದ ನಾಗೇಶ್ ಆಚಾರ್ಯ ಕಳೆದ ಡಿಸೆಂಬರಿನಲ್ಲಿ ಎಲ್ಲೂರು ಗ್ರಾಮದ ಸೌಮ್ಯಳನ್ನು ವಿವಾಹವಾಗಿದ್ದರು. ಆದರೆ ಈ ಮೊದಲು ಆಕೆಯನ್ನು ಸ್ಥಳೀಯ ನಿವಾಸಿ ಅವಿನಾಶ್ ಎಂಬಾತ ಪ್ರೇಮಿಸುತ್ತಿದ್ದ. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಅವಿನಾಶ್ ಆತ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಆಕೆಯನ್ನು ವಿವಾಹವಾಗುವುದಾಗಿ ಆಕೆ ಬಳಿ ತಿಳಿಸಿದ್ದ, ಆತನ ವರ್ತನೆಗೆ ಬೇಸತ್ತ ಆಕೆ ಹಿರಿಯರ ಸಮಕ್ಷಮದಲ್ಲಿ ದುರ್ಗ ಗ್ರಾಮದ ನಾಗೇಶ್ ಆಚಾರ್ಯನನ್ನು ವಿವಾಹವಾಗಿದ್ದಳು. ಆಕೆಯ ವಿವಾಹವನ್ನು ಸಹಿಸಲಾಗದ ಅವಿನಾಶ್ ಪದೇ ಪದೇ ನಾಗೇಶ್ ಆಚಾರ್ಯನಿಗೆ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ. ವಿವಾಹ ನಿಶ್ಚಿತಾರ್ಥದ ಬಳಿಕವೂ ಕೂಡ ಹಲವು ಬಾರಿ ಫೋನಾಯಿಸಿ ಮದುವೆಯಾಗದಂತೆ ಎಚ್ಚರಿಕೆ ನೀಡಿದ್ದ. ಅವಿನಾಶ್ ಜೈಲಿನಲ್ಲಿದ್ದುಕೊಂಡೇ ದೂರವಾಣಿ ಮೂಲಕ ಹಾಗೂ ಪುಢಾರಿಗಳ ಮೂಲಕ ಹಲವು ಬಾರಿ ಬೆದರಿಕೆಯೊಡ್ಡಿದ್ದ. ಬೆದರಿಕೆಗೆ ಅಂಜದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿರುವುದಾಗಿ ದುಷ್ಕರ್ಮಿಗಳಿಂದ ಚೂರಿಯಿಂದ ತಿವಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಗ ಗ್ರಾಮದ ನಾಗೇಶ್ ಆಚಾರ್ಯ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

ಆರೋಪಿಗಳ ಪೈಕಿ ಶಿಶಿರ್ ಸುವರ್ಣ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಜಾರಿ ಮಾಡಿತ್ತು. ಈ ಕೊಲೆ ಯತ್ನ ಪ್ರಕರಣಕ್ಕೆ ಅವಿನಾಶ್ ಕುಮ್ಮಕ್ಕಿನ ಕುರಿತು ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದ್ದು ಯಾವ ಕಾರಣಕ್ಕಾಗಿ ಕೊಲೆ ಯತ್ನ ನಡೆದಿದೆ ಎನ್ನುವುದು ಸಮಗ್ರ ತನಿಖೆಯ ಬಳಿಕವಷ್ಟೇ ಹೊರಬರಬೇಕಿದೆ.

 

LEAVE A REPLY