ಆಧುನಿಕತೆಯಲ್ಲೂ ಸಂಸ್ಕೃತಿ ಉಳಿಸಿಕೊಂಡ ಬುಡಕಟ್ಟು ಜನಾಂಗ

ಆದಿವಾಸಿಗಳ ವೇಷದಲ್ಲಿ ಮಕ್ಕಳು

ಮಂಗಳೂರು : ಪುರಭವನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಎರಡು ದಿನಗಳ ಬುಡಕಟ್ಟು ಉತ್ಸವ ರಾಜ್ಯದ ಬುಡಕಟ್ಟು ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸಿದಲ್ಲದೆ, ಜಾಗತೀಕರಣ, ಖಾಸಗೀಕರಣದ ಹಿನ್ನೆಲೆಯ ಆಧುನೀಕರಣದ ನಡುವೆಯು ಬುಕಟ್ಟು ಜನಾಂಗಗಳು ಮೂಲಸತ್ವವನ್ನು ಉಳಿಸಿಕೊಳ್ಳಲು ಶ್ರಮವಹಿಸಿರುವುದು ಕಂಡುಬಂದಿದೆ.

ಪುರಭವನದಲ್ಲಿ ಪ್ರದರ್ಶನವಾದ 42 ಬುಡಕಟ್ಟು ತಂಡಗಳ ಕಲಾ ಪ್ರದರ್ಶನದಲ್ಲಿ ಆಧುನಿಕತೆಯ ಸೋಂಕು ಇಲ್ಲದಿರಲಿಲ್ಲ. ಅದರೊಂದಿಗೆ ಇಂದಿನ ಕಾಲದಲ್ಲಿ ಲಭ್ಯವಿರುವ ಉಪಕರಣಗಳನ್ನು, ಉದಾಹರಣೆಗೆ ನೀರಿನ ಡ್ರಮ್ ಇತ್ಯಾದಿಗಳನ್ನು ತಮ್ಮ ವಾದ್ಯ ಉಪಕರಣಗಳನ್ನಾಗಿ ಬುಡಕಟ್ಟು ಜನರು ಮಾಡಿಕೊಂಡಿರುವುದು ಕೂಡ ಗಮನಾರ್ಹ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇರುವ ಸಿದ್ದಿ ಸಮುದಾಯ, ಕರಾವಳಿಯ ಕೊರಗ ಜನಾಂಗ, ಹಳೇ ಮೈಸೂರು ಪ್ರದೇಶ ಸೋಲಿಗರು, ಜೇನು ಕುರುಬರು, ಕಾಡು ಕುರುಬರು, ಎರವರು ತಮ್ಮದೇ ಆದ ಸಾಂಸ್ಕೃತಿಕ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮ ಸಂಸ್ಕೃತಿಯ ಭಾಗವಾದ ವಾದ್ಯ ಪ್ರಕಾರ, ಹಾಡು, ಕುಣಿತಗಳನ್ನು ಉಳಿಸಿಕೊಳ್ಳಲು ಶ್ರಮಿಸಿದ್ದಾರೆ.

ಮುಂಡಗೋಡು ಸಿದ್ದಿ ಸಮುದಾಯದ ಕರ್ನಾಟಕ ಜಾನಪದ ಅಕಾಡಮಿ ಸದಸ್ಯೆ ಜೂಲಿಯಾನ ಫರ್ನಾಂಡಿಸ್ ಅವರು ಹೇಳುವಂತೆ ಸಿದ್ದಿ ಸಮುದಾಯ ಮೂರು ಧರ್ಮಗಳಲ್ಲಿ ಸೇರಿಕೊಂಡಿದ್ದರೂ ಮೂಲ ಸಂಸ್ಕೃತಿಯ ನೆಲೆಯನ್ನು ಬಿಟ್ಟುಕೊಟ್ಟಿಲ್ಲ. ಪ್ರಕೃತಿಯ ನಡುವೆಯೇ ಇರಬಯಸುವ ಸಮುದಾಯ ಇದೇ ಮೊದಲ ಬಾರಿಗೆ ತಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಾನಪದ ಪ್ರಶಸ್ತಿಗಳ ಗೌರವ ಪಡೆದುಕೊಂಡಿದೆ.

ಆಧುನಿಕತೆಯ ನಡುವೆ ಅಳಿಸುತ್ತಿರುವ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಈ ಉತ್ಸವ ಸಹಕಾರಿಯಾಗಿದೆ ಎಂದು ಮುಂಡಗೊಡದ ಸಾವಿರ್ ಸಂತಾನ್ ಸಿದ್ದಿ ಅಭಿಪ್ರಾಯಪಟ್ಟರು. ರಾಜ್ಯದ 42 ಬುಡಕಟ್ಟು ತಂಡಗಳು ಭಾಗವಹಿಸಿದ ಬುಡಕಟ್ಟು ಉತ್ಸವದಲ್ಲಿ ರಾಜ್ಯೋತ್ಸವ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತೆ ಸೋಬಿನಾ ಮೊತೆಸ್ ಸಿದ್ದಿ  ಅವರು ನೃತ್ಯಕ್ಕೆ ಹೆಜ್ಜೆ ಹಾಕಿದರು.