ಪರಿಸರ ವಿನಾಶಿ ಗಣಿಗಾರಿಕೆಯನ್ನು ವಿರೋಧಿಸಲು ಟೊಂಕ ಕಟ್ಟಿರುವ 70 ಗ್ರಾಮಗಳ ಆದಿವಾಸಿಗಳು

ಆಧ್ಯಾತ್ಮಿಕತೆ, ಪರಿಸರ ಹಾಗೂ ಗಣಿಗಾರಿಕೆಯ ನಡುವೆ ಸಂಬಂಧ ಕಲ್ಪಿಸಿ ಪ್ರಕೃತಿಗೆ ವಿರುದ್ಧವಾದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವುದು ಇಲ್ಲಿನ ಜನರಿಗೆ ಅಗತ್ಯವಾಗಿದೆ. ಗಡಚಿರೊಲಿಯ ಜನರು ಈ ನಿಟ್ಟಿನಲ್ಲಿ ಆರಂಭವೊಂದನ್ನು ಮಾಡಿದ್ದಾರೆ.

ಮಾವೋವಾದಿಗಳ ಹಾವಳಿಯಿಂದ ಕಂಗೆಟ್ಟಿರುವ ಪೂರ್ವ ಮಹಾರಾಷ್ಟ್ರದ  ಗಡಚಿರೋಲಿ ಗ್ರಾಮದ ಪಾಲಿಗೆ ಡಿಸೆಂಬರ್ 5, 2016  ಒಂದು ಮಹತ್ವಪೂರ್ಣ ದಿನ. ಈ ಪ್ರದೇಶದಲ್ಲಿ ಗಣಿಗಾರಿಕೆ ಕೊನೆಗೊಳಿಸುವಂತೆ ಸರಕಾರಕ್ಕೆ ಒಕ್ಕೊರಲಿನಿಂದ ಆಗ್ರಹಿಸಲು ಆ ದಿನ  70 ಗ್ರಾಮಸಭೆಗಳ ಪ್ರತಿನಿಧಿಗಳು, ಆದಿವಾಸಿ ನಾಯಕರುಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಒಂದೆಡೆ ಸೇರಿದ್ದರು. ಗಣಿಗಾರಿಕೆಗೆ ನೀಡಲಾಗಿರುವ ಎಲ್ಲಾ  ಅನುಮತಿಗಳನ್ನೂ  ರದ್ದುಗೊಳಿಸುವಂತೆ ಅವರು ಸರಕಾರವನ್ನು ಆಗ್ರಹಿಸಿದರು.

ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷದ ಜಿಲ್ಲಾ ಮಟ್ಟದ ನಾಯಕರೂ ಭಾಗವಹಿಸಿದ್ದ ಈ ಸಭೆಯು ಅರಣ್ಯ ಹಾಗೂ ಜೀವ ವೈವಿಧ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಹಕ್ಕುಗಳ ಕಾಯಿದೆ ಹಾಗೂ ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ ಕಾಯಿದೆಯ  ಮಹತ್ವವನ್ನು ಸಾರಿ ಹೇಳಿತಲ್ಲದೆ  ನ್ಯಾಯ ಆಗ್ರಹಿಸುವ ಜನರಿಗೆ ಕಿರುಕುಳ ನೀಡದಂತೆ ಆಗ್ರಹಿಸಿತು. ಅಭಿವೃದ್ಧಿ ಹೆಸರಿನಲ್ಲಿ ಹಾಗೂ ಜನರನ್ನು ಮುಖ್ಯವಾಹಿನಿಗೆ ಸೇರಿಸುವ ತವಕದಲ್ಲಿ ಆದಿವಾಸಿ ಸಂಸ್ಕøತಿ ಹಾಗೂ ಜೀವನ ಶೈಲಿ ಮೇಲಿನ ದಾಳಿಯನ್ನೂ ಅದು ಖಂಡಿಸಿತು. ಪೊಲೀಸ್ ಹಿಂಸೆ ಹಾಗೂ ಗಣಿಗಾರಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಜನಸಾಮಾನ್ಯರು ಬಿಡಿ ರಾಜಕೀಯ ಪಕ್ಷಗಳು ಹಾಗೂ ಪತ್ರಕರ್ತರೂ ಹೆದರುವಂತಹ ಪ್ರದೇಶದಿಂದ ಬಂದಂತಹ ಈ ಒಕ್ಕೊರಲಿನ ಆಗ್ರಹ ಬದಲಾಗುತ್ತಿರುವ ಸನ್ನಿವೇಶವನ್ನು ವಿವರಿಸುತ್ತದೆ.

ಈ ಸಭೆ ಆಯೋಜನೆಯ ಹಿಂದಿದ್ದ ಪ್ರಮುಖ ಶಕ್ತಿಯೆಂದರೆ ಅದು ಸೂರಜಗಡÀ ಪಾರಂಪರಿಕ್ ಇಲಾಖಾ ಘೊಟುಲ್ ಸಮಿತಿ. ಈ ಸಮಿತಿಯಲ್ಲಿ 70 ಗ್ರಾಮಗಳ ಮುಖ್ಯಸ್ಥರು (ಗೈಟಾಸ್),  ಅರ್ಚಕರು (ಪೆರ್ಮ) ಹಾಗೂ ದಾಖಲೆ ಸಂಗ್ರಾಹಕರಿದ್ದಾರೆ (ಭುಮಿಯ).

ದೇವರನ್ನು ಸಂಪ್ರೀತಗೊಳಿಸುವ ಯತ್ನ

 ಆದರೆ ಈ ಸಭೆ ನಡೆಯುವಂತಾಗಲು ಆಗಸ್ಟ್ 9ರಂದು ನಡೆದ ಒಂದು ಘಟನೆಯೂ ಕಾರಣವಾಗಿದೆ. ದೇವರಿಗೂ ತಮ್ಮ ಬಗ್ಗೆ ಕೋಪವಿದೆಯೆಂದು ಗಡಚಿರೊಲಿಯ ಆದಿವಾಸಿಗಳಿಗೆ ತಿಳಿದು ಬಂದ ದಿನ ಅದಾಗಿತ್ತು. ಆ ದಿನ ಅವರು ದೇವರಿಗೆ ಬಲಿ ನೀಡಬೇಕೆಂದು ಉದ್ದೇಶಿಸಿದ್ದ ಆಡು ಕೂಡ ಬಲಿಯಾಗಲು ನಿರಾಕರಿಸಿತ್ತು. ಆಗ ಪರ್ಮ (ಅರ್ಚಕ) ಆ ಆಡಿನೊಂದಿಗೆ ಸಂವಹನ ನಡೆಸಿ ನಂತರ ಹೀಗೆಂದು ಹೇಳಿದ್ದ : “ನಮ್ಮ ಕಾಡುಗಳನ್ನು ರಕ್ಷಿಸಲು ನಾವೇನೂ ಮಾಡದೇ ಇರುವುದರಿಂದ ದೇವರು ನಮ್ಮ ಮೇಲೆ ಸಿಟ್ಟುಗೊಂಡಿದ್ದಾನೆ.” ಸೂರಜಗಡದ ಎಟಪಳ್ಳಿ ತಾಲೂಕಿನ 70 ಗ್ರಾಮಗಳ ಜನರಿಗೆ ಆತನೇನು ಹೇಳಿದನೆಂದು ಚೆನ್ನಾಗಿ ಅರ್ಥವಾಗಿತ್ತು.

ಮುಂದಿನ ತಿಂಗಳುಗಳಲ್ಲಿ ಲಾಯ್ಡ್ಸ್ ಸ್ಟೀಲ್ ಸಂಸ್ಥೆ ಸೂರಜಗಡದಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಯತ್ನಗಳನ್ನು ಆರಂಭಿಸಿತ್ತು. ಸಂಸ್ಥೆ ಗಣಿಗಾರಿಕೆ ಲೀಸನ್ನು ಮೊದಲು ಪಡೆದುಕೊಂಡಿದ್ದು 1993ರಲ್ಲಾಗಿದ್ದರೆ 2006-2007ರಲ್ಲಿ ಅದನ್ನು  ನವೀಕರಿಸಲಾಗಿತ್ತು. ಆರಂಭದಿಂದಲೂ ಆದಿವಾಸಿಗಳು ಹಾಗೂ ಮಾವೋವಾದಿಗಳು ಗಣಿಗಾರಿಕೆಯ ವಿರೋಧಿಗಳಾಗಿದ್ದರು.

ಲಾಯ್ಡ್ಸ್ ಸಂಸ್ಥೆಗೆ ಗಣಿಗಾರಿಕೆಗೆ ಅನುಮತಿ ನೀಡುವಾಗ ಎಲ್ಲಾ ಪರಿಸರ ಸಂಬಂಧಿತ ಹಾಗೂ ಇತರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿತ್ತು. ಟ್ರಕ್ಕುಗಳ ಸಾಗಾಟಕ್ಕೆ ಅನುವಾಗಲು ಸಂಸ್ಥೆ ಬಹಳಷ್ಟು ಅರಣ್ಯ ಪ್ರದೇಶಗಳನ್ನು ನಾಶಗೊಳಿಸಿತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ಗಣಿಗಾರಿಕೆ ವಿರೋಧಿಗಳು ಕಂಪೆನಿಯ ಯಂತ್ರೋಪಕರಣಗಳಿಗೆ ಬೆಂಕಿಯಿಕ್ಕಿ ಅದು ಹಿಂದಕ್ಕೆ ಹೋಗುವಂತೆ ಮಾಡಿದ್ದರು.

ತರುವಾಯ ಲಾಯ್ಡ್ಸ್ ಸಂಸ್ಥೆ ಇಲ್ಲಿ ಗಣಿಗಾರಿಕೆ ನಡೆಸಲು ಹೆಚ್ಚು  ಆಸಕ್ತಿ ವಹಿಸದೇ ಇರುವಂತೆಯೇ  ಜಿಂದಾಲ್ ಸ್ಟೀಲ್ ಕಂಪೆನಿಗೆ ಹತ್ತಿರದಲ್ಲಿಯೇ  ಗಣಿಗಾರಿಕೆಗೆ  ಲೀಸ್ ನೀಡಲಾಯಿತು.  ಹಲವಾರು ಇತರ ಕಂಪೆನಿಗಳೂ ಲೀಸಿಗೆ ಅರ್ಜಿ ಸಲ್ಲಿಸಿದ್ದವು. ಪ್ರಸ್ತಾವಿತ 11 ಗಣಿಗಳ ಪಟ್ಟಿಯನ್ನು ಸರಕಾರ ಸಿದ್ಧಪಡಿಸಿತ್ತು. ಆದರೆ  ಇದರಿಂದಾಗಿ ದಟ್ಟ ಅರಣ್ಯ ಪ್ರದೇಶಗಳು ನಾಶವಾಗುವುದು ನಿಶ್ಚಿತವಾಗಿತ್ತು. ಸ್ಥಳೀಯ ಜನರ ಹಾಗೂ ಆದಿವಾಸಿಗಳ ಅನುಮತಿ ಪಡೆಯಬೇಕೆಂದು ಯಾರಿಗೂ  ಅನಿಸಲೇ ಇಲ್ಲ.

ಸ್ಥಳದಲ್ಲಿ ಹೆಚ್ಚುವರಿ ಸಿಆರ್ಪಿಎಫ್ ತುಕಡಿಗಳನ್ನು ನಿಯೋಜಿಸಿದ ಬಳಿಕ ಲಾಯ್ಡ್ಸ್ ಕಂಪೆನಿ ಮತ್ತೆ ಗಣಿಗಾರಿಕೆಗೆ ಆಸಕ್ತಿ ವಹಿಸಿತ್ತು.

ಸೂರಜಗಡ ಪಾರಂಪರಿಕ್ ಇಲಾಖಾ ಘೊಟುಲ್ ಸಮಿತಿ  ಸ್ಥಾಪನೆಯಾದ ಬಳಿಕ ನವೆಂಬರ್ 14ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗಣಿಗಾರಿಕೆಯ ವಿರುದ್ಧ ತನ್ನ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿತ್ತು. “ಗಣಿಗಾರಿಕೆ ನಮ್ಮ ಜನರನ್ನು ನಿರ್ವಸಿತರನ್ನಾಗಿಸುವುದಲ್ಲದೆ ನಮ್ಮ ಸಂಸ್ಕøತಿಯನ್ನೂ ನಾಶಗೊಳಿಸುವುದು” ಎಂದು ಸಮಿತಿ ಹೇಳಿತು.

ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ ಲಾಯ್ಡ್ಸ್ ಕಂಪೆನಿ ಗಣಿಗಾರಿಕೆಯನ್ನು ಮುಂದುವರಿಸಿತ್ತಾದರೂ ಅದಕ್ಕೆ  ಸೇರಿದ 80 ವಾಹನಗಳನ್ನು ಮಾವೋವಾದಿಗಳು ಡಿಸೆಂಬರ್ 24ರಂದು ಬೆಂಕಿ ಹಚ್ಚಿದ ನಂತರ ಗಣಿಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡವು.

ಮುಂದಿನ ದಿನಗಳಲ್ಲಿ ಆದಿವಾಸಿಗಳು ತಮ್ಮ ದೇವ ದೇವತೆಗಳನ್ನು ಒಲಿಸುವ ಕಾರ್ಯಕ್ಕೆ ಮತ್ತೆ ಕೈಹಾಕಲಿದ್ದಾರೆ ಹಾಗೂ ಈ ಮೂಲಕ ತಮ್ಮ ಶ್ರೀಮಂತ ಸಂಸ್ಕøತಿಯ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸಲಿದ್ದರೆ.

ಆಧ್ಯಾತ್ಮಿಕತೆ, ಪರಿಸರ ಹಾಗೂ ಗಣಿಗಾರಿಕೆಯ ನಡುವೆ ಸಂಬಂಧ ಕಲ್ಪಿಸಿ ಪ್ರಕೃತಿಗೆ ವಿರುದ್ಧವಾದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವುದು ಇಲ್ಲಿನ ಜನರಿಗೆ ಅಗತ್ಯವಾಗಿದೆ. ಗಡಚಿರೊಲಿಯ ಜನರು ಈ ನಿಟ್ಟಿನಲ್ಲಿ ಆರಂಭವೊಂದನ್ನು ಮಾಡಿದ್ದಾರೆ.