ಹಳಿಯಲ್ಲಿ ಹೊಂಡ : ತಪ್ಪಿದ ದುರಂತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರೈಲ್ವೇ ಹಳಿಯಲ್ಲಿ ಭಾರೀ ಹೊಂಡ ಆಗಿರುವುದನ್ನು ಕಂಡ ಟ್ರಾಕ್ ಮೆನ್ ಸಕಾಲಿಕ ಸಮಯಪ್ರಜ್ಞೆ ಮತ್ತು ಅವರು ನಡೆಸಿದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಕಾಞಂಗಾಡ್ ಚಿತ್ತಾರಿಯಲ್ಲಿ ನಡೆದಿದೆ.

ಬೇಕಲ ಕೋಟೆ-ಕಾಞಂಗಾಡ್ ನಡುವಿನ ಚಿತ್ತಾರಿ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಟ್ರಾಕ್ ಮೆನ್ ವಿಜಯನ್ ಹಳಿ ಪರೀಕ್ಷಾ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಹಳಿಯಲ್ಲಿ ಹೊಂಡ ಇರುವುದನ್ನು ವಿಜಯನ್ ಗಮನಿಸಿದ್ದಾರೆ. ತಿರುವನಂತಪುರ-ಮಂಗಳೂರು, ಮಲಬಾರ್ ರೈಲು ಇದೇ ಮಾರ್ಗವಾಗಿ ಸಾಗಲು ಕೆಲವೇ ನಿಮಿಷಗಳಿದ್ದವು. ತಕ್ಷಣ ಅವರು ತನ್ನ ಬಳಿ ಇದ್ದ ದಿಟೋರ್ನೆಟರ್ ಸ್ಫೋಟಿಸಿ ಪೈಲಟ್ ಗಮನಕ್ಕೆ ತಂದರು. ಹೊಗೆ ಕಂಡು ಬಂದ ಕೂಡಲೇ 600 ಮೀಟರ್ ದೂರದಲ್ಲಿ ರೈಲನ್ನು ನಿಲುಗಡೆ ಗೊಳಿಸಲಾಯಿತು. ಇದರಿಂದ ಭಾರೀ ದುರಂತ ತಪ್ಪಿದೆ.

ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ರೈಲ್ವೇ ಇಂಜಿನೀಯರುಗಳ ತಂಡ ದುರಸ್ತಿ ಕಾರ್ಯ ನಡೆಸಿದರು. ಸುಮಾರು ಎರಡೂವರೆ ಗಂಟೆಗೆಳ  ಬಳಿಕ ರೈಲು ಸಂಚಾರ ಪುನರಾರಂಭಗೊಂಡಿತು.