ಪಶ್ಚಿಮ ಘಟ್ಟದ ಕಾಡಿನಲ್ಲಿ ಚಾರಣಿಗರ ಕಣ್ಣಿಗೆ ಬಿದ್ದ ಶಸ್ತ್ರಧಾರಿ ಬೇಟೆಗಾರರು

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮೂಡಿಗೆರೆ ಸಮೀಪ ಇತ್ತೀಚೆಗೆ ಚಾರಣಿಗರ ತಂಡವೊಂದರ ಕಣ್ಣಿಗೆ   ಶಸ್ತ್ರಸಜ್ಜಿತ ಬೇಟೆಗಾರರು ಬಿದ್ದಿದ್ದಾರೆ. ಬಂದೂಕು, ಕುಡಗೋಲು ಮುಂತಾದ ಆಯುಧಗಳನ್ನು ಹಿಡಿದುಕೊಂಡಿದ್ದ ಸುಮಾರು 30 ಮಂದಿ ಕೊಟ್ಟಿಗೆಹಾರದ ಒಂಬತ್ತುಗುಡ್ಡದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ಹುಡುಕುತ್ತಾ ಅಲೆಯುತ್ತಿದ್ದರೆಂದು ಚಾರಣಿಗರು ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಸಹ್ಯಾದ್ರಿ ಸಂಚಯದ ಸಂಘಟಕ ದಿನೇಶ್ ಹೊಳ್ಳ ಅವರು ತಮ್ಮ ಅನುಭವವನ್ನು ವಿವರಿಸುತ್ತಾ, ತಮ್ಮ ತಂಡ ಬೇಟೆಗಾರರನ್ನು ಪ್ರಶ್ನಿಸಿದಾಗ ಅವರು ತಮ್ಮನ್ನು ಬೆದರಿಸಿದರೆಂದು ಹೇಳಿದ್ದಾರೆ.

“ನಮ್ಮ ತಂಡದಲ್ಲಿ ಕೇವಲ ಐದು ಮಂದಿ ಮಾತ್ರ ಇದ್ದುದರಿಂದ ಅವರು ಬೆದರಿಸಿದಾಗ ನಾವೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರಲ್ಲೊಬ್ಬ ತಾವು ಜಿಂಕೆ ಮತ್ತು ಕಾಡು ಹಂದಿಗಳನ್ನು ಬೇಟೆಯಾಡುತ್ತಿರುವುದಾಗಿ ಹೇಳಿದ. ಅವುಗಳನ್ನು ನಿಷೇಧಿಸಲಾಗಿದೆ ಎಂದು ನಾನು ಅವರಿಗೆ ಹೇಳಿದಾಗ ಅವರು ಅದನ್ನು ಲಘುವಾಗಿ ಪರಿಗಣಿಸಿ ನಾವು ಪ್ರಭಾವಿಗಳುಎಂದರು. ನಾವು ಮತ್ತೇನೂ ಹೇಳದೆ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಮುಂದೆ ಸಾಗಿದೆವು” ಎಂದು ಹೊಳ್ಳ ಹೇಳಿದರು.

ಆರಂಭದಲ್ಲಿ ತಂಡದ ಸದಸ್ಯರು ತಾವು ದನ ಮೇಯಿಸಲು ಬಂದಿದ್ದಾಗಿ ಸುಳ್ಳು ಹೇಳಿದರೂ ನಂತರ ನಾವು ಅವರ ಆಯುಧಗಳನ್ನು ಸಂಶಯದ ದೃಷ್ಟಿಯಿಂದ ನೋಡಿದಾಗ ತಾವು ಬೇಟೆಗಾರರು ಎಂದು ಒಪ್ಪಿಕೊಂಡರು ಎಂದು ಚಾರಣಿಗರ ತಂಡದಲ್ಲಿದ್ದ ದಯಾನಂದ ಕೆ ಎ ಹೇಳಿದ್ದಾರೆ.

ಅರಣ್ಯ ಪ್ರದೇಶದಿಂದ ಹೊರ ಬಂದ ಮೇಲೆ ತಮಗೆ ಗೊತ್ತಿರುವ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕರೊಬ್ಬರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಲ್ಲದೆ ಅರಣ್ಯ ಸಚಿವ ರಮಾನಾಥ ರೈ ಅವರಿಗೂ ಮಾಹಿತಿ ನೀಡಿ ಬೇಟೆಗಾರರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾಗಿ ಹೊಳ್ಳ ಹೇಳಿದ್ದಾರೆ.

ಈ ಬಗ್ಗೆ ಸಚಿವ ರೈ ಅವರಲ್ಲಿ ಪ್ರಶ್ನಿಸಿದಾಗ ತಮಗೆ ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಈ ಬಗ್ಗೆ ತಿಳಿಸಿದ್ದಾಗಿ ಹೇಳಿದರಲ್ಲದೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಆದೇಶಿಸಿದ್ದಾಗಿಯೂ ತಿಳಿಸಿದ್ದಾರೆ.