ಮರಗಳನ್ನು ಕಡಿಯಲು ಅನುಮತಿಸಬಾರದಾಗಿತ್ತು ಎನ್ನುತ್ತಿರುವ ಹಲವರು

ಪಡೀಲಿನ ಪ್ರಸ್ತಾವಿತ ಡೀಸಿ ಕಚೇರಿ ಸಂಕೀರ್ಣ

ಮಂಗಳೂರು : ಪಡೀಲಿನಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕಾಗಿ ಕೊನೆಗೂ ಅಲ್ಲಿನ ಮೀಸಲು ಅರಣ್ಯ ಪ್ರದೇಶದ ಸುಮಾರು 620 ಮರಗಳು ಬಲಿಯಾಗಿವೆ. ಮರಗಳ ಮಾರಣಹೋಮದಿಂದ ನೊಂದಿರುವ ಹಲವರು ಸರಕಾರ ಟಿಂಬರ್ ಲಾಬಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು  ಕಳವಳ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಇನ್ನೂ ಆಳವಾಗಿ ಯೋಚಿಸಿ, ಹಸಿರು ಪೀಠವು ಇಲ್ಲಿನ ಮರಗಳನ್ನು ಕಡಿಯಲು ಅನುಮತಿ ನೀಡುವಲ್ಲಿ ಎಡವಿದೆ ಎನ್ನುತ್ತಿದ್ದಾರೆ.

ಈ ಪ್ರಕರಣದ ವಿಚಾರಣೆ ವೇಳೆ ಹಸಿರು ಪೀಠವು ಸರಕಾರದ ಪರವಾಗಿ 17 ಬಾರಿ ವಿಚಾರಣೆ ಮುಂದೂಡಿದ್ದರೆ, ಮರಗಳನ್ನು ಕಡಿಯುವುದರ ವಿರುದ್ದ ಅಪೀಲು  ಸಲ್ಲಿಸಿದ್ದ ಹಸಿರು ಕಾರ್ಯಕರ್ತೆ ಸುಮಾ ನಾಯಕ್ ಅವರ ಮನವಿ ಮೇರೆಗೆ ಒಂದೇ ಒಂದು ಬಾರಿ ವಿಚಾರಣೆ ಮುಂದೂಡುವ ಗೋಜಿಗೆ ಹೋಗಿಲ್ಲ. ಸುಮಾ ಅವರಿಗೆ ಒಮ್ಮೆ ವಿಚಾರಣೆಗೆ ಹಾಜರಾಗಲು ಅಸಾಧ್ಯವಾಗದೇ ಇದ್ದಾಗ ಹಾಗೂ ಈ ಬಗ್ಗೆ ಆಕೆ  ಸಕಾರಣ ನೀಡಿರುವ ಹೊರತಾಗಿಯೂ ಆಕೆ ಗೈರಾಗಿದ್ದ ಸಂದರ್ಭದಲ್ಲಿಯೇ ಆದೇಶ ಹೊರಬಿದ್ದಿದೆ.

ಅರಣ್ಯಾಧಿಕಾರಿಗಳು ಈ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೊಳಗಾಗಿದ್ದಾರೆಂದು ಹೇಳಲಾಗುತ್ತಿದೆ.  ಆದರೆ ಈ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಮರಗಳನ್ನು ಕಡಿದಿದ್ದಾರೆಂದರೆ ಅದಕ್ಕೆ ಕಾಂಗ್ರೆಸ್ ಮಾತ್ರ ಕಾರಣವಲ್ಲ, ಬದಲಾಗಿ ಬಿಜೆಪಿಯ ಮೌನವೂ ಕೆಲಸ ಮಾಡಿದೆ ಎನ್ನುತ್ತಾರೆ ಹಸಿರು ಕಾರ್ಯಕರ್ತರು.

ಅಷ್ಟಕ್ಕೂ ಪಡೀಲಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ನಿರ್ಮಿಸುವ ಅಗತ್ಯವಾದರೂ ಏನಿದೆ ಎಂದು ಮರಗಳನ್ನು ಕಡಿಯುವ ತನಕ ಮೌನವಾಗಿದ್ದ ಹಲವಾರು ನಾಗರಿಕ ಹಕ್ಕು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ಇ-ಆಡಳಿತದಿಂದಾಗಿ ಜಿಲ್ಲಾದಿಕಾರಿ ಕಚೇರಿ ಕೇವಲ ಪ್ರೊಟೋಕಾಲ್ ಸಭೆಗಳಿಗೆ, ಆರ್ಟಿಎ ಸಭೆಗಳಿಗೆ, ಶಾಂತಿ ಸಮಿತಿ ಹಾಗೂ ಅಧಿಕಾರಿಗಳ ಆಂತರಿಕ ಸಭೆಗಷ್ಟೇ  ಸೀಮಿತಗೊಂಡಿದೆ ಎಂದೇ ಹೇಳಬಹುದು. ಹಿಂದಿನಂತೆ ಇಲ್ಲಿ ಜನಜಂಗುಳಿ ಕಾಣದು. ಹೀಗಿರುವಾಗ ಡೀಸಿ ಕಚೇರಿ ಪಡೀಲಿನಲ್ಲಾದರೆ ಅಲ್ಲಿಗೆ ಆಗಮಿಸುವವರ ಸಂಖ್ಯೆ ಇನ್ನೂ ಕಡಿಮೆಯಾಗಬಹುದು ಎನ್ನುತ್ತಾರೆ ಹಲವರು.

ಇದೀಗ ಮರಗಳನ್ನು ಕಡಿದ ನಂತರ ಕೆಲ ನಾಗರಿಕ ಹಕ್ಕು ಕಾರ್ಯಕರ್ತರು ಇಲ್ಲಿ ಜಿಲ್ಲಾಡಳಿತ ಕಚೇರಿಯ ಅಗತ್ಯವೇ ಇಲ್ಲವೆಂದು ವಾದಿಸಿ ಅದರ ನಿರ್ಮಾಣದ ವಿರುದ್ಧ  ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆಯೆನ್ನಲಾಗುತ್ತದೆ. ಉಡುಪಿಯನ್ನು ಅನುಕರಣೆ ಮಾಡುವ ಯತ್ನವೇ ?

ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳ ನಂತರ ಉಡುಪಿಗೆ ತನ್ನದೇ ಆದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ತಲೆಯೆತ್ತಿದೆ. ಅಲ್ಲಿನ ಎಲ್ಲಾ ಸರಕಾರಿ ಕಚೇರಿಗಳು ಬೇರೆ ಬೇರೆ ಕಡೆ ಹರಡಿದ್ದರಿಂದ ಇದು ಅನುಕೂಲಕರವೂ ಅಗತ್ಯವೂ  ಆಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರತ್ಯೇಕ ಕಟ್ಟಡ ನಿರ್ಮಾಣ ಕೆಲ ಸ್ಥಾಪಿತ ಹಿತಾಸಕ್ತಿಗಳನ್ನು ಹಾಗೂ ಆಡಳಿತ ಪಕ್ಷದ ಕೆಲವರನ್ನು ಸಂಪ್ರೀತಗೊಳಿಸುವ ಉದ್ದೇಸದಿಂದಲೇ ಹೊರತು ಬೇರೆ ಉದ್ದೇಕಾಗಿ ಅಲ್ಲ.

 

LEAVE A REPLY