ಎಲ್ಲೆಡೆ ವನ ಮಹೋತ್ಸವ, ಇಲ್ಲಿ ಮರಕ್ಕೆ ಕೊಡಲಿಯೇಟು

ಸಂಪೂರ್ಣ ಬೋಳಿಸಲಾದ ದೇವದಾರ ಮರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಆದೂರು ಸೇತುವೆ ಸಮೀಪದಲ್ಲಿ ಹಲವು ವರ್ಷಗಳಿಂದ ಇದ್ದ ಬೃಹತ್ ದೇವದಾರು ಮರವೊಂದರ ರೆಂಬೆಗಳನ್ನು ತುಂಡರಿಸುವ ನೆಪ ಹೇಳಿ ಕೆಲ ಸ್ಥಳೀಯರು ಅದನ್ನು ಸಂಪೂರ್ಣ ಬೋಳಿಸಿ ಅದಕ್ಕೆ ಸಾವಿನ ದಾರಿ ತೋರಿಸಿದ್ದಾರೆ.

ಈ ಮರದಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಆದರೂ ವಿನಾಕಾರಣ ಇದರ ರೆಂಬೆಗಳನ್ನು ಕತ್ತರಿಸುವ ಅನುಮತಿಯನ್ನು ಬದಿಯಡ್ಕದಲ್ಲಿರುವ ಪಿಡಬ್ಲುಡಿ ಅಧಿಕಾರಿಗಳಿಂದ ಪಡೆಯಲಾಗಿತ್ತು. ಈ ಅವಕಾಶವನ್ನು ದುರುಪಯೋಗಗೊಳಿಸಿದವರು ಈ ಮರದ ಎಲ್ಲಾ ರೆಂಬೆಗಳನ್ನು ಕಡಿದುರುಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕೃತರಿಗೆ ದೂರು ನೀಡಲಾಗಿದ್ದು, ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ವಿಚಾರಣೆ ಮುಂದುವರಿಯುತ್ತಿದೆ. ಮರದ ರೆಂಬೆಗಳು ಕೆಳಗೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಇಲ್ಲಿ ನಿತ್ಯ ಸಂಚರಿಸುವವರಿಗೆ ಅಡ್ಡಿಯಾಗಿದೆ. ಸಮೀಪವೇ ಇರುವ ಬಾವಿಗೂ ಇದರಿಂದ ಹಾನಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.