`ರಾಜಕೀಯದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅಗತ್ಯ’

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಮತ್ತು ಹೊಣೆಗಾರಿಕೆಗೆ ಒತ್ತು ನೀಡುವ ಅವಶ್ಯಕತೆ ಇದೆ ಎಂದು ನಟ ಮತ್ತು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.

ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, “ಪ್ರಸಕ್ತ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಐದು ವರ್ಷಗಳಿಗೆ ಒಂದು ಬಾರಿ ಜನರನ್ನು ಭೇಟಿಯಾಗುತ್ತಿದ್ದಾರೆ ಅದು ಕೇವಲ ಚುನಾವಣೆಗಳು ಹತ್ತಿರವಾಗುತ್ತಿದ್ದಾಗ ಮಾತ್ರ. ರಸ್ತೆ ದುರಸ್ಥಿ ಮತ್ತು ಇತರ ಅಭಿವೃದ್ಧಿ ಕೆಲಸಗಳು ಕೂಡ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುರುಕಾಗುತ್ತವೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ” ಎಂದು ಅವರು ಹೇಳಿದರು.

“ಜನರು ಬದಲಾವಣೆ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ಬಯಸುತ್ತಾರೆ. ಪ್ರಸಕ್ತ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ರಾಜಕಾರಣಿಗಳು ಚುನಾಯಿತರಾಗಲು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಆದರೆ ಚುನಾವಣೆ ಬಳಿಕ ಸುಮ್ಮನೆ ಕೂರುತ್ತಾರೆ. ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದೊಂದಿಗೆ ಎಲ್ಲಾ ಕಾಲದಲ್ಲೂ ಸಂಪರ್ಕದಲ್ಲಿರಲು ಒಂದು ಸುವ್ಯವಸ್ಥಿತ ವ್ಯವಸ್ಥೆ ಹೊಂದಿರಬೇಕಾದುದು ಅಗತ್ಯ. ಇದು ಕ್ಲಿಷ್ಟಕರವಲ್ಲ. ಇಂದಿನ ಈ ದಿನಗಳಲ್ಲಿ ಮುಂದುವರಿದ ತಂತ್ರಜ್ಞಾನದಲ್ಲಿ ಜನರು ಸಾಮಾಜಿಕ ತಾಣಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬಹುದು” ಎಂದು ಅವರು ಹೇಳಿದರು.

ನನ್ನ ಪಕ್ಷ ಈಗಾಗಲೇ ಪ್ರಜಾಕೀಯ ಎಂಬ ಆಂಡ್ರಾಯಿಡ್ ಮೊಬೈಲ್ ಆ್ಯಪನ್ನು ಜಾರಿಗೊಳಿದ್ದು, ಪಕ್ಷದ ಹೆಚ್ಚಿನ ವಿವರಗಳು ವೆಬ್ ಸೈಟಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ ಡಬ್ಲ್ಯುಡಬ್ಲ್ಯುಡಬ್ಲ್ಯು.ಕೆಪಿಜೆಪಿಉಪ್ಪಿ.ಒಆರ್ಜಿ ಮತ್ತು ಫೇಸ್ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟ್ರಾಗ್ರಾಮ್ ಸೇವೆಗಳು ಲಭ್ಯವಿದೆ ಎಂದರು.

ಮುಂದಿನ ತಿಂಗಳ ಅಂತ್ಯದಲ್ಲಿ ಉಪೇಂದ್ರರು ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ.

 

 

LEAVE A REPLY