ಮೂಡುಬಿದಿರೆಯಲ್ಲಿ ಮಂಗಳಮುಖಿಯರ ಕಾಟ ತೀವ್ರ ಹೆಚ್ಚಳ

ನಮ್ಮ ಪ್ರತಿನಿಧಿ ವರದಿ   

ಮೂಡುಬಿದಿರೆ : ವಾರಕ್ಕೆ ಒಂದೊ, ಎರಡೊ ಬಾರಿ ಬರುತ್ತಿದ್ದ ಮಂಗಳಮುಖಿಯರು ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಎಂಬಂತೆ ಮೂಡುಬಿದಿರೆಯಲ್ಲಿ ಓಡಾಡುತ್ತಿದ್ದು, ಹಣಕ್ಕಾಗಿ ವ್ಯಾಪಾರಿಗಳನ್ನು ಪೀಡಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ.

ಅಚ್ಚರಿ ಎಂದರೆ ಅಸಲಿ ಮಂಗಳಮುಖಿಯರ ಮಧ್ಯೆ ನಕಲಿ ಮಂಗಳಮುಖಿಯರು ಕೂಡ ಸೇರಿಕೊಂಡಿರುವುದರಿಂದ ಇವರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ರೂ 10ಕ್ಕಿಂತ ಕಡಿಮೆ ಕೊಟ್ಟರೆ ಸ್ಥಳದಿಂದ ಕದಲುವುದಿಲ್ಲ. ವ್ಯಾಪಾರಿ ಏನಾದರು ಏರು ಧ್ವನಿಯಲ್ಲಿ ಮಾತನಾಡಿದರೆ ಬಟ್ಟೆ ಬಿಚ್ಚಬೇಕಾ ಎಂದು ಮಂಗಳಮುಖಿ ವ್ಯಾಪಾರಿಯನ್ನೆ ಹೆದರಿಸಿ ಮುಜುಗರಕ್ಕೀಡು ಮಾಡುತ್ತಾರೆ. ಹೀಗಾಗಿ ಅನೇಕ ವ್ಯಾಪಾರಿಗಳು ಏನೂ ಮಾತನಾಡದೆ ರೂ 10 ಕೊಟ್ಟು ಅವರನ್ನು ಕಳಿಸುತ್ತಾರೆ.

ಏತನ್ಮಧ್ಯೆ ನಕಲಿ ಮಂಗಳಮುಖಿಯರ ಹಾವಳಿ ಕೂಡ ಹೆಚ್ಚತೊಡಗಿದೆ. ಕೆಲವರು ಮತ್ತಿನಲ್ಲಿದ್ದು ವ್ಯಾಪಾರಿಗಳ ಜತೆ ಅಶ್ಲೀಲ ಮತ್ತು ಉಡಾಫೆಯಾಗಿ ವರ್ತಿಸುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಹೀಗಾಗಿ ಅಸಲಿ ಮಂಗಳಮುಖಿಯರ ಜತೆ ನಕಲಿ ಮಂಗಳಮುಖಿಯರ ಹಾವಳಿಯಿಂದಾಗಿ ಸಾರ್ವಜನಿಕರು ಮಂಗಳಮುಖಿಯರನ್ನು ಸಂಶಯದಿಂದ ಕಾಣುವಂತಾಗಿದೆ.