ವರ್ಗವಾಗಿ 3 ತಿಂಗಳಾದರೂ ಸ್ಥಾನ ಬಿಟ್ಟಿಲ್ಲದ ಸರಕಾರಿ ಆಸ್ಪತ್ರೆ ಸಿಬ್ಬಂದಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕರ್ತವ್ಯ ಲೋಪದಡಿ ಸಂಚಾರಿ ಆಸ್ಪತ್ರೆಯಿಂದ ತಾಲೂಕು ಸರಕಾರಿ ಆಸ್ಪತ್ರೆಗೆ ಪೂರ್ಣಕಾಲಿಕವಾಗಿ ನಿಯೋಜನೆಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ ಹೊರತಾಗಿಯೂ ನಿಯೋಜಿತ ಸಿಬ್ಬಂದಿ ಮಾತ್ರ ಮೇಲಧಿಕಾರಿ ಆದೇಶ ಉಲ್ಲಂಘಿಸಿ ಅದೇ ಹುದ್ದೆಯಲ್ಲಿ ಮುಂದುವರಿದಿರುವುದು ಗಮನ ಸೆಳೆದಿದೆ.

ಇವರ ವಿರುದ್ದ ಸಾರ್ವಜನಿಕ ದೂರು, ಇಲಾಖಾಧಿಕಾರಿಗಳೊಂದಿಗೆ ಉದ್ದಟತನ ತೋರಿರುವುದು ಹಾಗೂ ಆಸ್ಪತ್ರೆಯ ಕರ್ತವ್ಯದ ವೇಳೆಯಲ್ಲಿ ಬಾಗಿಲು ಮುಚ್ಚಿರುವುದು ಇತ್ಯಾದಿ ಕರ್ತವ್ಯ ಲೋಪದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಹಲವು ಬಾರಿ ಎಚ್ಚರಿಕೆ ನೋಟಿಸು ನೀಡಲಾಗಿತ್ತು. ಆದರೂ ಇದ್ಯಾವುದಕ್ಕೂ ಉತ್ತರ ನೀಡದೆ ಇರುವುದರಿಂದ ಮುಂದಿನ ಶಿಸ್ತು ಕ್ರಮ ಜರುಗಿಸುವವರೆಗೆ  ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ  ಪೂರ್ಣಕಾಲಿಕ ನಿಯೋಜನೆಯ ಮೇರೆಗೆ ಕರ್ತವ್ಯ ನಿರ್ವಹಿಸಲು ಕಳೆದ ಡಿ 31ರಂದು ಜಿಲ್ಲಾ ಆರೋಗ್ಯಾಧಿಕಾರಿ ಲಿಖಿತ ಆದೇಶ ಹೊರಡಿಸಿದ್ದರು. ಇದೀಗ ಡಿಎಚ್‍ಒ ಆದೇಶ ಹೊರಡಿಸಿ ಮೂರು ತಿಂಗಳು ಕಳದೆರೂ ಸಿಬ್ಬಂದಿ ಅದೇ ಜಾಗದಲ್ಲಿ ಕರ್ತವ್ಯ ಮುಂದುವರೆಸಿರುವುದು ಮಾಹಿತಿ ಹಕ್ಕು ಕಾರ್ಯಕರ್ತರೋರ್ವರು ಸಂಗ್ರಹಿಸಿದ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ದಲಿತ ಮುಖಂಡ ವಿಶ್ವನಾಥ ಚೆಂಡ್ತಿಮಾರ್ ಎಂಬವರು ಮಾಹಿತಿ ಹಕ್ಕನಡಿ ಪಡೆದುಕೊಂಡ ಮಾಹಿತಿ ಪ್ರಕಾರ ಇದು ದೃಡಪಟ್ಟಿದೆ. ಜನವರಿ ತಿಂಗಳ ಹಾಜರಾತಿ ಪುಸ್ತಕದಲ್ಲಿ ಇವರ ಹೆಸರಿನ ಮುಂದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಆದೇಶದ ಮೇರೆಗೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಬರೆಯಲಾಗಿದ್ದರೂ ಅದರ ಮೇಲ್ಭಾಗದಲ್ಲಿಯೇ ಹಸ್ತಾಕ್ಷರ ನಮೂದಿಸಿ ಹಾಜರಾತಿ ನಮೂದಾಗಿದೆ.

ಇದೀಗ ಇವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ದಾಖಲೆಗಳೊಂದಿಗೆ  ಜಿ ಪಂ ಸಿಇಒ ಅವರಿಗೆ ಪತ್ರ ರವಾನಿಸಿದ್ದಾರೆ.