ಮುಲ್ಕಿ ಠಾಣೆಯಲ್ಲಿ ದೀರ್ಘ ಕಾಲ ಪಿಸಿ ಆಗಿರುವವರನ್ನು ವರ್ಗಾಯಿಸಿ

ಸಾಂದರ್ಭಿಕ ಚಿತ್ರ

ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳೆದ ಏಳೆಂಟು ವರ್ಷದಿಂದ ಒಂದೇ ಠಾಣೆಯಲ್ಲಿ ಅಂಟಿಕೊಂಡಿರುವ ಪಿಸಿಗಳಾಗಿರುವವರಿಗೆ ಠಾಣೆಯಿಂದ ವರ್ಗಾವಣೆ ಯಾಕಿಲ್ಲ ? ಇವರಿಗೆ ಪೊಲೀಸ್ ಡಿಪಾರ್ಟ್‍ಮೆಂಟಿನಲ್ಲಿ ಅಷ್ಟೊಂದು ಇನ್‍ಫ್ಲ್ಯೂಯೆನ್ಸ್ ಇದೆಯೇ ? ಬೇರೆ ಠಾಣೆಯಲ್ಲಿನ ಪಿಸಿಗಳನ್ನು ನೆಟ್ಟಗೆ ಎರಡು ವರ್ಷ ನಿಲ್ಲಲು ಬಿಡದೇ ಬೇರೆಡೆ ದಿಢೀರ್ ವರ್ಗಾವಣೆ ಮಾಡುತ್ತಿರುವಾಗ ಇವರೇನು ಅಂಥ ಜನಮೆಚ್ಚುವ ಕೆಲಸ ಮಾಡಿದ್ದಾರೆ ? ಅದಲ್ಲದೆ ವಾರದ ಹಿಂದೆ ದ ಕ ಜಿಲ್ಲೆಯ ಹೆಚ್ಚಿನ ಠಾಣೆಗಳಲ್ಲಿ ಪಿಸಿಗಳಿಗೆ ಬೇರೆಡೆ ವರ್ಗಾವಣೆಯಾಗಿದ್ದರೂ ಮುಲ್ಕಿ ಠಾಣೆ ಇಬ್ಬರಿಗೆ ಯಾಕೆ ವರ್ಗಾವಣೆ ಭಾಗ್ಯ ಇಲ್ಲ ?
ಫಲಿಮಾರು ಮೂಲದ ಪಿಸಿ ವಿರುದ್ಧ ತುಂಬಾ ದೂರುಗಳು ಬರುತ್ತಿದೆ. ಇವರು ಠಾಣೆಯಲ್ಲಿ ಇರುವುದೇ ವಿರಳವಂತೆ. ಹೆಚ್ಚಿನ ಸಮಯವನ್ನು ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಕುಂಜೆ, ಫಲಿಮಾರು. ಶಾಂಭವನದಿ, ಕೊಟ್ನಾಯಗುತ್ತು ಮೊದಲಾದ ಕಡೆ ಮರಳುಗಾರಿಕೆ ನಡೆಸುವವರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಆರಾಮವಾಗಿರುವುದು ನೋಡಿದರೆ ಇವರು ಪೊಲೀಸ್ ಡ್ಯೂಟಿ ಯಾವಾಗ ಮಾಡುತ್ತಾರೆಂದು ಅವರಿಗೆ ಗೊತ್ತು. ಇವರಿಗೆ ಸರಕಾರ ಕೈ ತುಂಬಾ ಸಂಬಳ ಕೊಡುತ್ತಿಲ್ಲವೇ ? ಅಷ್ಟಾದರೂ ಮತ್ಯಾಕೆ ಅತಿಯಾಸೆ ?
ಅದೇ ರೀತಿ ಮತ್ತೊಬ್ಬ ಪಿಸಿ ಕೂಡಾ ಪೊಲೀಸ್ ಸರಹದ್ದಿನಲ್ಲಿ ನಡೆಯುವ ಎಲ್ಲಾ ವರ್ಷಾವಧಿ ಜಾತ್ರೆಗಳಲ್ಲಿ ಜೂಜು ನಡೆಸುವವರಲ್ಲಿ ಸೆಟ್ಟಿಂಗ್ ಮಾಡಿಕೊಂಡಿರುವುದು ಇಲ್ಲಿನ ಠಾಣಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಜಾತ್ರೆಯಲ್ಲಿ ಯಾವುದೇ ಜೂಜಾಟಕ್ಕೆ ಅನುಮತಿ ಕೊಡಬಾರದೆನ್ನುವ ಕನಿಷ್ಠ ಜ್ಞಾನವೂ ಈ ಠಾಣೆಯ ಅಧಿಕಾರಿಗಳಿಲ್ಲ್ಲವೇ ? ಆದ್ದರಿಂದ ಒಂದೇ ಠಾಣೆಗಳಲ್ಲಿ ಅಂಟಿಕೊಂಡಿರುವ ಪಿಸಿಗಳನ್ನು ಕೂಡಲೇ ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಠಾಣೆಯಿಂದ ಬೇರಡೆ ವರ್ಗಾಯಿಸಿ ಉತ್ತಮ ಕೆಲಸ ಮಾಡುವ ಈ ಊರಿನ ಪರಿಚಯ ಕಡಿಮೆ ಇರುವ ಹೊಸ ಪಿಸಿಗಳನ್ನು ಹಾಕಿ ಈ ಠಾಣೆಯ ಮರ್ಯಾದೆ ಕಾಪಾಡುವಂತೆ ಉಪಕಾರ ಮಾಡಿ.

  • ಸುಧಾಕರ ಕೋಟ್ಯಾನ್,
    ಫಲಿಮಾರು-ಪಡುಬಿದ್ರೆ