ಇನ್ನು ರೈಲು ಪ್ರಯಾಣಕ್ಕೂ ಸಿಗಲಿದ್ದಾರೆ `ಕ್ಯಾಪ್ಟನ್’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇದುವರೆಗೆ ನಾವು ನೌಕೆಗೊಬ್ಬ ಕ್ಯಾಪ್ಟನ್ ಎಂದು ಕೇಳಿದ್ದೆವು. ಇನ್ಮೇಲೆ ನಾವು `ಟ್ರೈನಿಗೊಬ್ಬ ಕ್ಯಾಪ್ಟನ್’ ಪಡೆದುಕೊಳ್ಳಲಿದ್ದೇವೆ. ಮಂಗಳೂರು-ಚೆನ್ನೈ ಸೂಪರ್ ಫಾಸ್ಟ್ ಮೇಲಿನಲ್ಲಿ ಟ್ರೈನ್ ಕ್ಯಾಪ್ಟನ್ ಸೌಲಭ್ಯ ಪ್ರಯಾಣಿಕರಿಗೆ ಮೊತ್ತ ಮೊದಲ ಬಾರಿಗೆ ಸಿಗುತ್ತಿದೆ. ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಲು ಈ ಟ್ರೈನ್ ಕ್ಯಾಪ್ಟನ್ ವ್ಯವಸ್ಥೆಯನ್ನು ಪಾಲ್ಗಾಟ್ ರೈಲು ವಿಭಾಗ ಜಾರಿಗೆ ತಂದಿದೆ. ಸೋಮವಾರದಂದು ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ.

`ಕ್ಯಾಪ್ಟನ್ ಆಫ್ ದಿ ಟ್ರೈನ್’ ಎನ್ನುವ ಕಲ್ಪನೆ ಸದನ್ ರೈಲ್ವೇಯ ಚೀಫ್ ಕಮರ್ಶಿಯಲ್ ಮ್ಯಾನೇಜರ್ ಆಗಿರುವ ಅಜೀತ್ ಸಕ್ಸೇನಾ ಅವರ ಕನಸಿನ ಕೂಸಾಗಿತ್ತು. ಕೆಲವು ಸಮಯಗಳ ಹಿಂದೆ ಕಟಪಾಡಿಯಿಂದ ಎರ್ನಾಕುಳಂಗೆ ಪ್ರಯಾಣಿಸುವ ವೇಳೆ ಮಹಿಳೆಯೊಬ್ಬರು ತನಗೆ ಕಾದಿರಿಸಲಾದ ಬೋಗಿಯಲ್ಲಿ ಸೀಟು ಸಿಗದೇ ಅದನ್ನು ತಂಡ ಆಕ್ರಮಿಸಿ ಮಹಿಳೆ ಅನುಭವಿಸಿದ ಮಾನಸಿಕ ಕಿರಿಕಿರಿಯನ್ನು ಅರಿತ್ತಿದ್ದ ಅಜೀತ್ ಸಕ್ಸೇನಾರಿಗೆ ಅಂದಿನಿಂದ ಇಂತಹ ಸಮಸ್ಯೆಗಳಿಗೆ ಏನಾದರೂ ಪರಿಹಾರ ಹುಡುಕಬೇಕು ಅನ್ನಿಸಿದಾಗ, ಇಂತಹ ಒಂದು ಕಲ್ಪನೆ ಹುಟ್ಟುಕೊಂಡು ಅದೀಗ ಸಾಕಾರಗೊಂಡಿದೆ ಎನ್ನುತ್ತಾರವರು.

ಐದು ತಿಂಗಳ ಯೋಜನೆ ಬಳಿಕ ಮೊದಲಿಗೆ ತಿರುವನಂತಪುರಂ-ಚೆನ್ನೈ ನಡುವೆ ಓಡುವ ಸೂಪರ್ ಫಾಸ್ಟ್ ಮೇಲಿನಲ್ಲಿ ಈ ಕ್ಯಾಪ್ಟನ್ ಸೇವೆ ಅಳವಡಿಸಲಾಗಿದೆ. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಸುರಕ್ಷತೆ ಪಡೆಯಲಿದ್ದಾರಲ್ಲದೇ, ಪ್ರಯಾಣಿಕರು ಎದುರಿಸುವ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹೊಂದಲಿದ್ದಾರೆ. ಪ್ರಥಮ ಟ್ರೈನ್ ಕ್ಯಾಪ್ಟನ್ ಆಗಿ ಅನೂಪಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.