ಚಾಕು ತೋರಿಸಿ ದರೋಡೆ : ರೈಲು ಪ್ರಯಾಣಿಕರ ಆರೋಪ

ಸಾಂದರ್ಭಿಕ ಚಿತ್ರ

ಮಂಗಳೂರು : ದೆಹಲಿಯಿಂದ ಮಂಗಳೂರಿಗೆ ಬರುವ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನಲ್ಲಿ  ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ತಂಡವೊಂದು ಚಾಕುತೋರಿಸಿ ಚಿನ್ನದ ಸರ ಎಗರಿಸಿ ಪರಾರಿಯಾಗಿದೆ.

ಕೊಡಗು ಮೂಲದ ಮಣಿ (68) ಅವರ ಮೊಮ್ಮಗಳಾದ ಗುಣಶ್ರೀ ಮತ್ತುವರ ಸ್ನೇಹಿತರಾದ ಪೂಜಾ, ಶ್ರೀಧರ, ಪ್ರಶಾಂತ್ ಮತ್ತು ವಾಸಿನ್ ಬೆದರಿಕೆಗೆ ಒಳಗಾದವರು.

ಈ ಆರು ಮಂದಿ ಕೂಡಾ ಮೂರ್ನಾಡು ನಿವಾಸಿಗಳಾಗಿದ್ದು, ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸವನ್ನು ಮುಗಿಸಿ ನಿಝಾಮುದ್ದೀನ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ವಾಪಾಸ್ ಬರುತ್ತಿದ್ದಾಗ ಮಹಾರಾಷ್ಟ್ರ ಪನ್ವೆಲ್ ಬಳಿ ಇವರದ್ದೇ ಕಂಪಾರ್ಟಮೆಂಟಿನಲ್ಲಿದ್ದ ತಂಡವೊಂದು ಅಸಭ್ಯವಾಗಿ ವರ್ತಿಸುತ್ತಿತ್ತು. ಇದನ್ನು ಪ್ರಶ್ನಿಸಿದ್ದರಿಂದ ಕೆರಳಿದ ಆ ತಂಡ ಇವರ ಚಾಕು ತೋರಿಸಿ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಕೂಡಲೇ ಇವರು ಚೈನ್ ಎಳೆದು ರೈಲು ನಿಲ್ಲಿಸಲು ಯತ್ನಿಸಿದ್ದರೂ ಸಾದ್ಯವಾಗಲಿಲ್ಲ. ಈ ಬಗ್ಗೆ ಅಧಿಕಾರಿಗಳೇ ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಆರ್ ಪಿ ಎಫ್ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷ್ಯ ತೋರಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಎಂದು ಸಲಹೆ ಕೊಟ್ಟರು. ರೈಲು ಪೊಲೀಸರಿಗೆ ದೂರು ನೀಡಿದರೂ ಸರಿಯಾಗಿ ಸ್ಪಂದನೆ ಇಲ್ಲದ ಕಾರಣ ನೊಂದ ಇವರೆಲ್ಲರೂ ಮಹಾರಾಷ್ಟ್ರದಲ್ಲಿ ರೈಲು ನಿಂತಾಗ ಪ್ರತಿಭಟನೆ ನಡೆಸಿದ್ದರು. ಆದರೆ ರೈಲು ಹೊರಟ ಕಾರಣ ಇವರೆಲ್ಲರೂ ಮಂಗಳೂರು ಜಂಕ್ಷನ್ನಿಗೆ ಬಂದು ಮಾಧ್ಯಮಗಳಿಗೆ ವಿವರಣೆ ನೀಡಿದರು.