ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಟ್ರಾಫಿಕ್ ಸಮಸ್ಯೆಯದೇ ಮೇಲುಗೈ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಪೊಲೀಸ್ ಚಿಸುಪರಿಟೆಂಡೆಂಟ್ ಲಕ್ಷ್ಮಣ್ ನಿಂಬರ್ಗಿ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಟ್ರಾಫಿಕ್ ಸಮಸ್ಯೆ ದೂರುಗಳೇ ಮೇಳೈಸಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಒಂದು ಗಂಟೆಯ ಫೋನ್ ಇನ್ ಕಾರ್ಯಕ್ರಮಕ್ಕೆ ಒಟ್ಟು 15 ಕರೆಗಳು ಬಂದಿದ್ದವು.

ಈ ಸಂದರ್ಭ ಲಕ್ಷ್ಮಣ ನಿಂಬರ್ಗಿ ಕರೆಗಳಿಗೆ ಪ್ರತಿಕ್ರಿಯಿಸುತ್ತಾ, ರಾಷ್ಟ್ರೀಯ ಹೆದ್ದಾರಿ 66ರ ಕಲ್ಯಾಣಪುರ-ಸಂತೆಕಟ್ಟೆ ಜಂಕ್ಷನ್ ಪ್ರದೇಶದಲ್ಲಿ ತಲೆದೋರಿದ್ದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಕಲ್ಯಾಣಪುರ-ಸಂತೆಕಟ್ಟೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಜಂಕ್ಷನಲ್ಲಿ ಬಸ್ಸುಗಳು ಬೇಕಾಬಿಟ್ಟಿ ನಿಲ್ಲಿಸುತ್ತಿವೆ. ಇದರಿಂದ ಪಾದಚಾರಿಗಳಿಗೆ ಚಲಿಸುವುದಕ್ಕೂ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169ಎ ಇಂದ್ರಾಳಿಯಲ್ಲಿ ಶಾಲಾ ಮಕ್ಕಳು ಮತ್ತು ಹೆತ್ತವರಿಗೆ ರಸ್ತೆ ದಾಟುವುದಕ್ಕೂ ಕಷ್ಟ ಎದುರಾಗಿದೆ. ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ದೂರುದಾರರು ಹೇಳಿದರು.

ಮಣಿಪಾಲದ ಇನ್ನೊಬ್ಬ ಕರೆದಾರರು ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ರಸ್ತೆ ವಿಭಜಕಗಳು ಹಾಳಾಗಿದ್ದು, ವಾಹನಗಳು ರಸ್ತೆ ವಿಭಜಕಗಳ ಮೇಲೆ ಸಾಗುತ್ತಿವೆ ಎಂದು ದೂರಿಕೊಂಡಿದ್ದಾರೆ. ಶೀಘ್ರದಲ್ಲೇ ಪೊಲೀಸ್ ಸಿಬ್ಬಂದಿ ಎರಡೂ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿಂಬರ್ಗಿ ಭರವಸೆ ನೀಡಿದ್ದಾರೆ.

ಇನ್ನೊಬ್ಬ ಕರೆದಾರರು ಮಿಷನ್ ಆಸ್ಪತ್ರೆಯ ಬಳಿ ಗುಟ್ಕಾ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಗುಟ್ಕಾ ಮಾರಾಟ ಮಾಡುತ್ತಿರುವ ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೆಚ್ಚಿನ ದ್ವಿಚಕ್ರ ವಾಹನ ಸವಾರಿಗರು ಹೆಲ್ಮೆಟ್ ಧರಿಸುತ್ತಿಲ್ಲ ಮಾತ್ರವಲ್ಲ ಅತ್ಯಂತ ವೇಗವಾಗಿ ವಾಹನ ಚಲಾಯಿಸುತ್ತಾರೆ ಎಂದು ಇನ್ನೊಬ್ಬ ಕರೆದಾರರು ದೂರಿದರು. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗವುದು ಎಂದು ನಿಂಬರ್ಗಿ ಭರವಸೆ ನೀಡಿದ್ದಾರೆ.

LEAVE A REPLY