ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಟ್ರಾಫಿಕ್ ಸಮಸ್ಯೆ ದೂರುಗಳೇ ಹೆಚ್ಚು

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಶುಕ್ರವಾರದ ನಗರ ಪೊಲೀಸ್ ಕಮಿಷನರೇಟ್ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಹೆಚ್ಚಿನ ನಗರ ನಿವಾಸಿಗಳು ಟ್ರಾಫಿಕ್ ಮತ್ತು ಪಾರ್ಕಿಂಗಿಗೆ ಸಂಬಂಧಿಸಿದ ಸಮಸ್ಯೆಗಳನ್ನೇ ಹೇಳಿದರು.
ಬಲ್ಮಠ ರಸ್ತೆಯ ಬೆಂದೂರವೆಲ್ ಸರ್ಕಲ್ ಮತ್ತು ಕಲೆಕ್ಟರ್ಸ್ ಗೇಟ್ ನಡುವಿನ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ  ಇದು ಹಲವು ಸಮಯಗಳಿಂದ ಇರುವ ಸಮಸ್ಯೆಯಾಗಿದ್ದು  ಇದರ ವಿರುದ್ಧ ಪಂಪ್ವೆಲ್ ನಿವಾಸಿ ಕರೆ ಮಾಡಿ ಪಾದಚಾರಿಗಳ ಸುರಕ್ಷತೆಗಾಗಿ ಇಲ್ಲಿನ ಪಾರ್ಕಿಂಗನ್ನು ತೆರವುಗೊಳಿಸಬೇಕು ಎಂದು ನಗರ ಪೊಲೀಸರನ್ನು ಒತ್ತಾಯಿಸಿದರು.
ಕರಂಗಲ್ಪಾಡಿಯ ಜೈಲ್ ರೋಡಿನ ಬಾರೊಂದರ ಎದುರುಗಡೆ ವಾಹನಗಳನ್ನು ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ ಎಂದು ಕದ್ರಿ ನಿವಾಸಿ ಫೋನ್ ಮಾಡಿ ದೂರಿಕೊಂಡರು. ರಸ್ತೆಗಳಲ್ಲೇ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದು ಮಾತ್ರವಲ್ಲ, ಈ ವಾಹನಗಳಲ್ಲಿ ಮದ್ಯವನ್ನು ಸರಬರಾಜು ಕೂಡ ಮಾಡಲಾಗುತ್ತಿದೆ  ಜೊತೆಗೆ ರಸ್ತೆಯಲ್ಲಿಯೇ ನಿಂತು ಧೂಮಪಾನ ಕೂಡ ಮಾಡುತ್ತಾರೆ ಎಂದು ದೂರಿದರು  ಮಲ್ಲಿಕಟ್ಟೆ ನಿಲ್ದಾಣದಲ್ಲಿ ಕೂಡ ಇದೇ ಸಮಸ್ಯೆ ಇದೆ ಎಂದು ಅವರು ಹೇಳಿದರು.
ದೂರುಗಳನ್ನು ಆಲಿಸಿದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಅಧಿಕಾರಿ ಎಂ ಶಾಂತರಾಜು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆಯಲ್ಲಿ ವಾಹನಗಳು ಎರಡೂ ಕಡೆಗಳಿಂದ ಚಲಿಸುತ್ತವೆ. ಮೇಲಾಗಿ ಸರ್ವಿಸ್ ರಸ್ತೆಗಳಲ್ಲಿ ಅನೇಕ ವಾಹನಗಳನ್ನು ಗಂಟೆಗಟ್ಟಲೆ ಪಾರ್ಕ್ ಮಾಡಿ ಪಾರ್ಕಿಂಗ್ ಪ್ರದೇಶವಾಗಿ ಪರಿವರ್ತಿಸಿದ್ದಾರೆ. ಇದರಿಂದ ವಾಹನ ಚಲನೆಗೆ ಅಡಚಣೆ ಉಂಟಾಗಿದೆ ಎಂದು ಮುಲ್ಕಿ ನಿವಾಸಿಯೊಬ್ಬರು ದೂರಿದರು.
ಇನ್ನೊಬ್ಬರು ಕರೆ ಮಾಡಿ ರಾಷ್ಟ್ರೀಯ ಹೆದ್ದಾರಿ 66 ಕೆಪಿಟಿ ಜಂಕ್ಷನ್ ಬಳಿ ವಿಸ್ತರಣೆಯಾಗಿದೆ  ಆದರೆ ಈ ವಿಸ್ತರಣೆಯಾದ ಜಾಗವನ್ನು ಟ್ರಕ್ ಪಾರ್ಕಿಂಗಿಗೆ ಬಳಸಲಾಗುತ್ತಿದೆ. ಇದರಿಂದ ವಿಮಾನ ನಿಲ್ದಾಣದ ಕಡೆಗೆ ಹೋಗುವ ರಸ್ತೆಗೆ ಸುಗಮವಾಗಿ ವಾಹನ ತಿರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ನೋಂದಣಿ ಪ್ಲೇಟ್ ಇಲ್ಲದೆ ದ್ವಿಚಕ್ರ ವಾಹನಿಗರು ಓಡಾಡುತ್ತಿರುವ ಬಗ್ಗೆ ಕಾರ್ ಸ್ಟ್ರೀಟ್ ನಿವಾಸಿಯೊಬ್ಬರು ಧ್ವನಿಯೆತ್ತಿದ್ದಾರೆ. ಇಂತಹ ವಾಹನಗಳ ವಿರುದ್ಧ ಪೊಲೀಸರು ನಿರಂತರ ದೂರುಗಳನ್ನು ದಾಖಲಿಸುತ್ತಾ ಬಂದಿದ್ದಾರೆ  ಈ ಪ್ರಕ್ರಿಯೆಯನ್ನು ಇನ್ನೂ ಮುಂದುವರಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಶಾಂತರಾಜು ಭರವಸೆ ನೀಡಿದರು.
ಸುಮಾರು ಒಂದು ಗಂಟೆ ಅವಧಿಯ ಫೋನ್ ಇನ್ ಕಾರ್ಯಕ್ರಮದಲ್ಲಿ 16 ಜನರು ಕರೆ ಮಾಡಿ ಅಹವಾಲುಗಳನ್ನು ತೋಡಿಕೊಂಡಿದ್ದಾರೆ. ಕರೆ ಮಾಡಿದ ಎಲ್ಲರಿಗೂ ಪೊಲೀಸ್ ಅಧಿಕಾರಿ ಪರಿಹಾರದ ಭರವಸೆಯನ್ನು ನೀಡಿದರು.