ಎರ್ರಾಬಿರ್ರಿ ವಾಹನ ಪಾರ್ಕಿಂಗ್ ವಿರುದ್ಧ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ

ಸಾಂದರ್ಭಿಕ ಚಿತ್ರ

ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದ ಬಳಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವ ಬೈಕ್ ಹಾಗೂ ಬಸ್ಸುಗಳ ವಿರುದ್ಧ ಸುರತ್ಕಲ್ ಟ್ರಾಫಿಕ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅನೇಕ ವಾಹನ ಸವಾರರಿಗೆ ದಂಡ ವಿದಿಸಿದ್ದಾರೆ ಹಾಗೂ ಬಸ್ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಲ್ಕಿ ಬಸ್ ನಿಲ್ದಾಣದ ಕೆಳ ಬದಿ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಅನಧಿಕೃತ ಬೈಕ್ ಪಾರ್ಕಿಂಗ್ ಮಾಡಿದವರ ಬೈಕಿಗೆ   ಟ್ರಾಫಿಕ್ ಪೊಲೀಸರು ಲಾಕ್ ಅಳವಡಿಸಿದರು. ಸುಮಾರು 20 ಬೈಕುಗಳು ಇದ್ದ ಕಾರಣ ಪೊಲೀಸರು ಲಾಕ್ ಕೊರತೆ ಅನುಭವಿಸಬೇಕಾಯಿತು. ಮುಲ್ಕಿಯಿಂದ ಮಂಗಳೂರು ಕಡೆಗೆ ಹಾಗೂ ಮೂಡುಬಿದಿರೆ ಕಡೆಗೆ ಹೋಗುವ ಬಸ್ಸುಗಳು ನೂರ್ ಕಾಂಪ್ಲೆಕ್ಸ್ ಬಳಿ ಅನಧಿಕೃತ ಪಾರ್ಕಿಂಗ್ ಮಾಡುತ್ತಿದ್ದು, ಅಂತಹ ಬಸ್ಸುಗಳ ಚಾಲಕರಿಗೆ ಎಚ್ಚರಿಕೆ ನೀಡಿ, ಬಸ್ಸುಗಳನ್ನು ರಿಕ್ಷಾ ಪಾರ್ಕಿಂಗ್ ಬಳಿ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ.

ಅಪಘಾತ ವಲಯಕ್ಕೆ ಕಡಿವಾಣ ಹಾಕಲು ಆಗ್ರಹ

ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಬಸ್ ನಿಲ್ದಾಣದ ಬಳಿ ಮೂರು ಕಡೆ ಅಪಾಯಕಾರಿ ಡೈವರ್ಶನ್ ಇದ್ದು, ಅನೇಕ ಅಪಘಾತಗಳು ಸಂಭವಿಸುತ್ತಿದೆ. ಮುಲ್ಕಿ ಬಿಲ್ಲವ ಸಂಘದ ಬಳಿ, ಬಸ್ ನಿಲ್ದಾಣದ ಬಳಿ, ಬಪ್ಪನಾಡು ದೇವಳದ ಬಳಿ ಈಗಾಗಲೇ ಅನೇಕ ಅಪಘಾತಗಳು ನಡೆದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯ ಸರ್ವೀಸ್ ರಸ್ತೆ ಕಾಮಗಾರಿ ನಿಂತು ಹೋಗಿದೆ. ಕೂಡಲೇ ಹೆದ್ದಾರಿ ಪ್ರಾಧಿಕಾರವು ಡಿವೈಡರುಗಳನ್ನು ಮುಚ್ಚಿಸಿ ಸರ್ವೀಸ್ ರಸ್ತೆ ಕಮಗಾರಿ ಆರಂಭಿಸಬೇಕೆಂದು ಸ್ಥಳೀಯ ರಿಕ್ಷಾ ಚಾಲಕ ವಿಲ್ಫಿ ಕೊಲ್ಲೂರುಪದವು ಒತ್ತಾಯಿಸಿದ್ದಾರೆ.