ಪೊಲೀಸ್ ಆಯುಕ್ತರ ಮೊದಲ ಫೋನ್-ಇನ್ ಕಾರ್ಯಕ್ರಮದಲ್ಲಿ ಟ್ರಾಫಿಕ್ ದೂರುಗಳ ಸರಮಾಲೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ನೂತನ ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ತಮ್ಮ ಮೊದಲ ಫೋನ್ ಇನ್ ಕಾರ್ಯಕ್ರಮವನ್ನು ನಡೆಸಿದರು. ಈ ಹಿಂದೆ ಚಂದ್ರಶೇಖರ್ ಪ್ರಾರಂಭಿಸಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಸುರೇಶ್ ಇದನ್ನು ಮುಂದುವರಿಸಿದ್ದು, ಒಂದು ಗಂಟೆಗಳ ಕಾಲಾವಧಿಯಲ್ಲಿ ಸುಮಾರು 31 ಮಂದಿ ಫೋನ್ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ರಾವ್ ಅಂಡ್ ರಾವ್ ಸರ್ಕಲ್ ಬಳಿ ಲಾರಿ ಚಾಲಕರು ಪಾರ್ಕಿಂಗ್ ಮಾಡುತ್ತಿರುವುದು ಮತ್ತು ಲೋಡ್, ಅನ್ಲೋಡ್ ಮಾಡುತ್ತಿರುವುದರಿಂದ ವಿಪರೀತ ಸಮಸ್ಯೆಯಾಗುತ್ತಿದೆ ಎಂದು ಹಂಪನಕಟ್ಟೆ ನಿವಾಸಿಯೊಬ್ಬರು ದೂರಿದರೆ, ಕ್ಲಾಕ್ ಟವರ್ ಸರ್ಕಲ್ ಬಳಿ ಮತ್ತು ಎ ಬಿ ಶೆಟ್ಟಿ ವೃತ್ತದ ಬಳಿ ಬಸ್ಸುಗಳು ನಿಧಾನಗತಿಯಲ್ಲಿ ಚಲಿಸುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ದೂರೂ ಬಂತು.

ಬಿಜೈ ರಸ್ತೆ ಪಕ್ಕದ ಶೋರೂಂ ಬಳಿ ವಾಹನಗಳು ಪಾರ್ಕಿಂಗ್ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ವಿಪರೀತ ತೊಂದರೆ ಆಗುತ್ತಿದೆ. ಬ್ಯಾರಿಕೇಡುಗಳನ್ನು ಅಳವಡಿಸಿದ್ದರೂ ಅದನ್ನು ಮೀರಿ ಇಲ್ಲಿ ಪಾರ್ಕಿಂಗ್ ಮಾಡಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೇಂದ್ರ ಮಾರುಕಟ್ಟೆಗೆ ತೆರಳಲು ಫುಟ್ಪಾತ್ ವ್ಯಾಪಾರಿಗಳಿಂದ ಸಮಸ್ಯೆಯಾಗುತ್ತಿದೆ ಎಂಬ ಬಗ್ಗೆಯೂ ದೂರು ಬಂತು. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳಿ ಎಂದು ಸಂಚಾರಿ ಪೊಲೀಸರಿಗೆ ಕಮಿಷನರ್ ಸೂಚಿಸಿದರು.