ಲಾರಿ ಟಯರ್ ಸ್ಫೋಟ : ಹೆದ್ದಾರಿ ಸಂಚಾರ ಬಂದ್

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಹೆದ್ದಾರಿ ಮಧ್ಯದಲ್ಲೇ ಲಾರಿಯೊಂದರ ಟಯರ್ ಸ್ಫೋಟಗೊಂಡು ಕುಸಿದು ನಿಂತ ಪರಿಣಾಮ ಸುಮಾರು ಅರ್ಧ ದಿನ ಟ್ರಾಫಿಕ್ ಜಾಂ ಉಂಟಾದ ಘಟನೆ ಪಾಣೆಮಂಗಳೂರು ಸಮೀಪದ ಭಾನುವಾರ ನಡೆದಿದೆ.

ಭಾನುವಾರ ಬೆಳಿಗ್ಗೆ ಪಾಣೆಮಂಗಳೂರು ನೇತ್ರಾವತಿ ನೂತನ ಸೇತುವೆ ಸಮೀಪ ಕಬ್ಬಿಣದ ಸರಳುಗಳನ್ನು ಹೇರಿಕೊಂಡು ಬಂದ ಲಾರಿಯೊಂದರ ಟಯರ್ ಹಠಾತ್ ಹೆದ್ದಾರಿ ಮಧ್ಯದಲ್ಲೇ ಸ್ಫೋಟಗೊಂಡು ಕುಸಿದು ನಿಂತಿತು. ಪರಿಣಾಮ ಲಾರಿಯಲ್ಲಿದ್ದ ಕೆಲ ಕಬ್ಬಿಣದ ಸರಳುಗಳೂ ಕೂಡಾ ಹೆದ್ದಾರಿಗೆ ಬಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಲಾರಿ ಚಾಲಕ ಹಾಗೂ ನಿರ್ವಾಹಕ ಕೆಟ್ಟು ಹೋದ ಲಾರಿಯನ್ನು ಬದಿಗೆ ಸರಿಸದೆ, ಹೆದ್ದಾರಿಗೆ ಬಿದ್ದ ಸರಳುಗಳನ್ನೂ ತೆರವುಗೊಳಿಸದೆ ಇರುವುದು ಅವಾಂತರಕ್ಕೆ ಕಾರಣವಾಯಿತು. ಘಟನೆ ಸಂಭವಿಸಿದ ತಕ್ಷಣ ಸಾರ್ವಜನಿಕರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರಾದರೂ ಸಕಾಲಕ್ಕೆ ಪೊಲೀಸರು ಸ್ಪಂದಿಸದೆ ಇದ್ದ ಪರಿಣಾಮ ತಾಸುಗಟ್ಟಲೆ ಟ್ರಾಫಿಕ್ ಜಂಜಾಟಕ್ಕೆ ಕಾರಣವಾಯಿತು.

ಹೆದ್ದಾರಿಯ ಎರಡೂ ಕಡೆ ಮೈಲುದ್ದ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಭಾನುವಾರ ತಾಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಶುಭ ಕಾರ್ಯಕ್ರಮಗಳು ಇದ್ದುದರಿಂದ ವಾಹನ ದಟ್ಟಣೆಯೂ ಅಧಿಕವಾಯಿತು. ಇದರಿಂದ ವಾಹನಗಳು ಕಿಷ್ಕಿಂಧೆಯಂತೆ ಸಾಲುಗಟ್ಟಿದ ಪರಿಣಾಮ ಪರಿಸ್ಥಿತಿ ಪೊಲೀಸರ ಕೈಮೀರಿ ಹೋಗಿತ್ತು. ಹೆದ್ದಾರಿಯಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡಲು ಪಾಣೆಮಂಗಳೂರು ಪೇಟೆಯ ಒಳಭಾಗದಿಂದ ಹಳೆ ನೇತ್ರಾವತಿ ಸೇತುವೆ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ ಅರ್ಧ ತಾಸಿನಲ್ಲೇ ಅಲ್ಲಿಯೂ ಟ್ರಾಫಿಕ್ ಜಾಂ ಉಂಟಾಗಿ ಇಡೀ ಪಾಣೆಮಂಗಳೂರು ಪೇಟೆ ಹಾಗೂ ಹೆದ್ದಾರಿ ಎರಡೂ ಕಡೆ ಜಾಂ ಉಂಟಾಗಿ ಎಲ್ಲಿಂದಲೂ ವಾಹನ ಸಂಚಾರ ಅಸಾಧ್ಯವಾಯಿತು. ಕೊನೆಗೂ ಸ್ಥಳೀಯ ಯುವಕರೇ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಣಕ್ಕೆ ಪ್ರಯತ್ನಿಸಿದರು. ಒಂದು ಕಡೆಯಿಂದ ಮೆಲ್ಕಾರ್-ಬೋಳಂಗಡಿವರೆಗೂ ವಾಹನಗಳ ಸಾಲು ಕಂಡು ಬಂದರೆ, ಇನ್ನೊಂದು ಕಡೆ ಬಿ ಸಿ ರೋಡು-ಕೈಕಂಬದವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು. ಬೆಳಿಗ್ಗೆ ಪ್ರಾರಂಭವಾದ ಟ್ರಾಫಿಕ್ ಜಾಂ ಮಧ್ಯಾಹ್ನ ದಾಟುವವರೆಗೂ ಮುಂದುವರಿದಿತ್ತು. ಕೊನೆಗೂ ಪೊಲೀಸರೇ ಜೆಸಿಬಿ ಬಳಸಿ ಕಬ್ಬಿಣದ ಸರಳು ಹಾಗೂ ಕೆಟ್ಟು ನಿಂತ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿ ಅಪರಾಹ್ನದ ಬಳಿಕ ಟ್ರಾಫಿಕ್ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.