ಹಣ ಬಿಕ್ಕಟ್ಟು : ವ್ಯಾಪಾರಿಗಳಿಂದ ಎಸ್ ಬಿ ಐ ಮುಂದೆ ಧರಣಿ

ವ್ಯಾಪಾರಿಗಳಿಂದ ನಡೆದ ಪ್ರತಿಭಟನಾ ಮೆರವಣಿಗೆ

ನಮ್ಮ ಪ್ರತಿನಿಧಿ ವರದಿ

   ಕಾಸರಗೋಡು : 500 ಮತ್ತು 1000 ರೂ ಹಿಂಪಡೆದುಕೊಂಡ ಪರಿಣಾಮವಾಗಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾನಗರದಲ್ಲಿರುವ ಎಸ್ ಬಿ ಐ ಬ್ಯಾಂಕ್ ಪ್ರಧಾನ ಕಚೇರಿಯ ಮುಂದೆ ಧರಣಿ ನಡೆಯಿತು.

ಧರಣಿಯನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾಧ್ಯಕ್ಷ ಕೆ ಅಹಮ್ಮದ್ ಶರೀಫ್ ಉದ್ಘಾಟಿಸಿದರು. ನೋಟು ಅಸಿಂಧುಗೊಳಿಸಿದ ಬಳಿಕ ತಲೆದೋರಿರುವ ನೋಟುಗಳ ಕ್ಷಾಮ ಮತ್ತು ಅದರ ಪರಿಣಾಮವಾಗಿ ಉಂಟಾಗಿರುವ ವ್ಯಾಪಾರ ಕುಸಿತಕ್ಕೆ ಈ ತನಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ವ್ಯಾಪಾರಿಗಳು ಬುಧವಾರ ಪ್ರತಿಭಟನೆಯನ್ನು ನಡೆಸಿದ್ದಾರೆ.

ವ್ಯಾಪಾರಿಗಳು ವಿದ್ಯಾನಗರದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜು ಬಳಿ ಜಮಾಯಿಸಿ ಅಲ್ಲಿಂದ ಮೆರವಣಿಗೆ ಮೂಲಕ ಬ್ಯಾಂಕಿನತ್ತ ತೆರಳಿ ಧರಣಿ ಮುಷ್ಕರ ನಡೆಸಿದರು. ಪ್ರತಿಭಟನೆಯಲ್ಲಿ ಹಲವಾರು ಮಂದಿ ವ್ಯಾಪಾರಿಗಳು ಪಾಲ್ಗೊಂಡರು.