ಬ್ಯಾಂಕ್ ವ್ಯವಹಾರಗಳಿಗೆ ಹೆಚ್ಚುವರಿ ಶುಲ್ಕ : ಕಷ್ಟ ಎದುರಿಸುತ್ತಿರುವ ಮಾರುಕಟ್ಟೆ ವಲಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೋಟು ಅಪಮೌಲ್ಯದ ಬಳಿಕ ಕ್ಯಾಶ್ಲೆಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬ್ಯಾಂಕ್ ಗ್ರಾಹಕರು ಮೂರು ವ್ಯವಹಾರಗಳ ಬಳಿಕ ಹೆಚ್ಚುವರಿ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ನಂತರವಂತೂ ವ್ಯಾಪಾರಸ್ತರು ಕಂಗಾಲಾಗಿದ್ದಾರೆ. ಹೀಗಾಗಿ ವಿವಿಧ ಕಾರ್ಡ್ ಬಳಕೆ ಮಾಡಲೇ ಬೇಕಾದ ಅನಿವಾರ್ಯತೆಗೆ ಸಿಲುಕುವ ಸ್ಥಿತಿ.

ಈ ವ್ಯವಸ್ಥೆಯಿಂದಾಗಿ ಅನೌಪಚಾರಿಕ ಮಾರುಕಟ್ಟೆ ವಲಯ ಹೆಚ್ಚು ಕಷ್ಟವನ್ನು ಎದುರಿಸಬೇಕಾಗಿದೆ.

ಮಾರುಕಟ್ಟೆಯ ಮೀನು ವ್ಯಾಪಾರಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಬೇಕಾದಷ್ಟು ಮೀನು ತಂದು ಮಾರುಕಟ್ಟೆಯಲ್ಲಿ ಕಾಯುತ್ತಿದ್ದರೆ ಯಾರೂ ಬರುತ್ತಿಲ್ಲ. ಆದರೆ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಉರ್ವಾ ಮಾರುಕಟ್ಟೆಯ ಮೀನು ಮಾರಾಟಗಾರ ಮಹಿಳೆ ಜಯಂತಿ ಕರ್ಕೇರ.

ಮೂರು ಬಾರಿಯ ನಗದು ವ್ಯವಹಾರದ ಬಳಿಕ ನಡೆಸುವ ವ್ಯವಹಾರಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದರಿಂದ ಗ್ರಾಹಕರು ಕಂಗೆಟ್ಟಿರುವುದು ನಿಜ. ಆದರೆ ಹಣ ಕಳೆದುಕೊಳ್ಳದೇ ಮಾಲುಗಳಲ್ಲಿ ಉತ್ತಮ ಮೀನು ಸಿಗುತ್ತದೆ. ಅಲ್ಲಿ ಡೆಬಿಟ್ ಕಾರ್ಡ್ ಉಪಯೋಗಿಸುವ ಮೂಲಕ ನಾವು ಮೀನು ಖರೀದಿಸಬಹುದಾಗಿದೆ. ಮಾರುಕಟ್ಟೆಗೆ ತೆರಳಬೇಕಾದ ಅಗತ್ಯವಿಲ್ಲ. ಈ ಕಾರಣಕ್ಕಾಗಿಯೇ ಮಾರುಕಟ್ಟೆಗೆ ಮೀನು ಖರೀದಿಸಲು ಯಾರೂ ಬರುತ್ತಿಲ್ಲ ಎನ್ನುತ್ತಾರೆ ಕೆಲವು ಗ್ರಾಹಕರು.

ಈಗ ಎಲ್ಲೆಡೆ ಹವಾನಿಯಂತ್ರಿತ ಮೀನು ಮಾರಾಟದ ಅಂಗಡಿಗಳಿವೆ. ಬಿಕರ್ನಕಟ್ಟೆ, ಮರೋಳಿ, ಶಕ್ತಿನಗರ, ವೆಲೆನ್ಸಿಯಾ ಮತ್ತು ಲೇಡಿಹಿಲ್ಲುಗಳಲ್ಲಿ ಈ ಅಂಗಡಿಗಳಿವೆ. ನಾವು ನೋಟು ಅಮಾನ್ಯಗೊಳ್ಳುವ ಮುಂಚೆಯೇ ಏರ್ ಕಂಡೀಶನ್ ಮೀನುಮಾರಾಟದ ಅಂಗಡಿಯನ್ನು ಪ್ರಾರಂಭಿಸಿದ್ದು, ಅಲ್ಲಿ ಕಾರ್ಡ್ ಬಳಕೆ ಮಾಡಿಸಿದ್ದೇವೆ. ವಾರದೊಳಗೆ ನಮಗೆ ಗ್ರಾಹಕರು ಹೆಚ್ಚಾಗಿದ್ದಾರೆ. ಇಲ್ಲಿ ಮಾರುಕಟ್ಟೆಗಿಂತಲೂ ಉತ್ತಮವಾದ ತಾಜಾ ಮೀನು ಲಭ್ಯವಿದೆ ಎನ್ನುತ್ತಾರೆ ಯುವ ಉದ್ಯಮಿ ಅಬ್ದುಲ್ ಹಮೀದ್.

ಸಾಮಾನು ಖರೀದಿ ಮಾಡಬೇಕಾದ ಎಲ್ಲಾ ಪ್ರದೇಶಗಳಲ್ಲೂ ಪಿಒಎಸ್ ಮೆಷಿನ್ ಇಟ್ಟಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಹಣವನ್ನಲ್ಲದೇ, ಡೆಬಿಟ್ ಕಾರ್ಡ್ ಬಳಕೆ ಮಾಡುವಂತೆಯೂ ಇಲ್ಲ. ಹೀಗಾಗಿ ಸಹಜವಾಗಿಯೇ ಸಮಸ್ಯೆ ಕಾಡುತ್ತಿದೆ ಎನ್ನುತ್ತಾರೆ ರಾಜೇಶ್ ನಾಯ್ಕ್.