ಪುತ್ತೂರು ನಗರಯೋಜನಾ ಅಧಿಕಾರಿ ಲಂಚ ಪಡೆವಾಗ ರೆಡ್ ಹ್ಯಾಂಡ್ ಕ್ಯಾಚ್

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ವ್ಯಕ್ತಿಯೋರ್ವ ರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ನಗರಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಲಾವಣ್ಯ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಬೊಳುವಾರಿನ ರಾಮಮೋಹನ್ ಪೈ ಎಂಬವರು 26 ಸೆಂಟ್ಸ್ ಸ್ಥಳವನ್ನು ಭೂಪರಿವರ್ತನಾ ವಲಯ ದೃಢಿಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಪೈಯವರು ಅನಾರೋಗ್ಯ ಮತ್ತು ವಯಸ್ಕರಾಗಿದ್ದ ಹಿನ್ನೆಲೆಯಲ್ಲಿ ಅವರು ತನ್ನ ಸ್ನೇಹಿತ ಕೇಶವ ಪೂಜಾರಿ ಸಂಪ್ಯರವರ ಮೂಲಕ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ವಿಚಾರಿಸಲು ತಿಳಿಸಿದ್ದರು. ಅವರು ನಗರಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕಿ ಲಾವಣ್ಯರವರಲ್ಲಿ ವಿಚಾರಿಸಿದ ವೇಳೆ ಅವರು ರೂ 20 ಸಾವಿರ ಡಿಮಾಂಡ್ ಮಾಡಿದ್ದರು.

ಬಳಿಕ ಚರ್ಚಿಸಿ ರೂ 10 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದರು. ಹಣ ಲಾವಣ್ಯರವರಿಗೆ ನೀಡುವ ಮುನ್ನ ಭ್ರಷ್ಟಾಚಾರ ನಿಗ್ರಹ ದಳದವರಿಗೆ ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಪೂರ್ವ ಯೋಜನೆಯಂತೆ ಲಾವಣ್ಯರವರಿಗೆ ಲಂಚ ನೀಡುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳದವರು ಕಣ್ಗಾವಲು ಇರಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಮಂಗಳೂರು 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.