ಶೀಘ್ರವೇ ಪುರಭವನದ ಬಾಡಿಗೆ ಪರಿಷ್ಕರಣೆ

 ಪರಿಷತ್ ಸಭೆಯಲ್ಲಿ ಮಂಡಿಸಿ ನಿರ್ಧಾರ ಎಂದ ಮೇಯರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಪುರಭವನದಲ್ಲಿ ನಾಟಕ, ಭರತನಾಟ್ಯ, ಯಕ್ಷಗಾನ, ಜಾದೂ, ಸಂಗೀತ ಇತ್ಯಾದಿ ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಕ್ಕೆ ಅಗತ್ಯವಾದ ಬೆಳಕು, ಧ್ವನಿ ಮೊದಲಾದವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ತಾಂತ್ರಿಕ ಸಮಸ್ಯೆಗಳನ್ನು ಶೀಘ್ರವೇ ನಿವಾರಿಸಲು ಕಲಾಕ್ಷೇತ್ರದ ಪ್ರತಿನಿಧಿಯೊಬ್ಬರನ್ನು ಒಳಗೊಂಡ ಸಮಿತಿ ರಚಿಸಿ ಪುರಭವನಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಲಾವಿದರ ಬೇಡಿಕೆಯಂತೆ ಪುರಭವನದ ಬಾಡಿಗೆ ದರವನ್ನು ಪರಿಷ್ಕರಿಸಿ ಮುಂದಿನ ಪರಿಷತ್ತಿನಲ್ಲಿ ಮಂಡಿಸುವುದಾಗಿ ಮೇಯರ್ ಕವಿತಾ ಸನಿಲ್ ಭರವಸೆ ನೀಡಿದರು.

ಪುರಭವನ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ ಹಾಗೂ ಬಡ ಕಲಾವಿದರಿಗೆ ಸಿಗುತ್ತಿಲ್ಲ ಎನ್ನುವ ವ್ಯಾಪಕ ದೂರುಗಳು ಬಂದ ಕಾರಣ ಮೇಯರ್ ಕವಿತಾ ಸನಿಲ್, ಕಲಾವಿದರ ಪ್ರತಿನಿಧಿಗಳನ್ನು ಕರೆಸಿ ವಿಶೇಷ ಸಭೆ ನಡೆಸಿದರು.

ಪುರಭವನ ನವೀಕರಣಗೊಳಿಸುವ ಸಂದರ್ಭದಲ್ಲಿ ಕಲಾಕ್ಷೇತ್ರದ ಬಗ್ಗೆ ಹೆಚ್ಚು ಅರಿಯದ ಧರ್ಮರಾಜ್ ಅವರ ಸಲಹೆ ಕೇಳಿಕೊಂಡು ಮಾಡಿರುವ ಕ್ರಮಕ್ಕೆ ಕಲಾವಿದರೂ ಅಸಮಾಧಾನ ವ್ಯಕ್ತಪಡಿಸಿದರು.

ಪುರಭವನದಲ್ಲಿ ಉಚಿತ ಪ್ರವೇಶದೊಂದಿಗೆ ನಡೆಸಲಾಗುವ ಕಲಾಕಾರ್ಯಕ್ರಮಗಳಿಗೆ ಬಾಡಿಗೆ ದರದಲ್ಲಿ ವಿನಾಯಿತಿ ಹಾಗೂ ಟಿಕೆಟ್ ಕಾರ್ಯಕ್ರಮಗಳಿಗೆ 10,000 ರೂ ಬಾಡಿಗೆ ದರವನ್ನು ನಿಗದಿಪಡಿಸುವಂತೆ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಆಗ್ರಹಿಸಿದರು.

ಇಂದು ಪುರಭವನ ಶ್ರೀಮಂತರ ಸಭಾಂಗಣವಾಗಿದೆ. ಹೀಗಾಗಿ ಎಲ್ಲಾ ಕಲಾವಿದರು ತಮ್ಮ ತಂಡಗಳ ಪ್ರದರ್ಶನವನ್ನು ಮುಂಬೈಗೋ ಅಥವಾ ದೇವಸ್ಥಾನದ ಜಗಲಿಯಲ್ಲೋ ಮಾಡಬೇಕಾದ ದುಃಸ್ಥಿತಿ ಒದಗಿದೆ ಎಂದು ಪಟ್ಲ ಅಶೋಕ್ ಶೆಟ್ಟಿ ಮತ್ತು ದೇವದಾಸ್ ಕಾಪಿಕಾಡ್ ದೂರಿದರು.

ಸಭಾಂಗಣದ ಪಕ್ಕದಲ್ಲೇ ಮಿನಿ ಸಭಾಂಗಣ ನಿರ್ಮಿಸಲಾಗಿದ್ದು, ಇಲ್ಲೂ ಸರಿಯಾದ ವ್ಯವಸ್ಥೆ ಇಲ್ಲದೆ ನಿಷ್ಪ್ರಯೋಜಕವಾಗಿದೆ ಎಂದು ದೂರಿದರು.

ಈ ವೇಳೆ ಪುರಭವನ ಪಡೆಯಲು ಆನ್ಲೈನ್ ವ್ಯವಸ್ಥೆ ಮಾಡುವ ಬಗ್ಗೆ ಮೇಯರ್ ನಿರ್ಧರಿಸಿದರೂ ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಇದರಿಂದ ಬುಕ್ಕಿಂಗ್ ಅಸಾಧ್ಯ. ದಿನಾಂಕ ಮತ್ತು ನಿರ್ದಿಷ್ಟ ದಿನಗಳನ್ನು ಬ್ಲಾಕ್ ಮಾಡುವ ಸಾಧ್ಯತೆ ಇದೆ ಎಂದು ಕಲಾವಿದರು ದೂರಿದರು.