ಬೆಳ್ತಂಗಡಿಯಲ್ಲಿ ಕೆಡವಲಾದ ಸಮಾಜ ಮಂದಿರ ಸ್ಥಳದಲ್ಲಿ ಪುರಭವನ ನಿರ್ಮಿಸಿ

ಬೆಳ್ತಂಗಡಿಯಲ್ಲೊಂದು ಸುಸಜ್ಜಿತ ಪುರಭವನ ಇಲ್ಲದೇ ಹೋದಲ್ಲಿ ಇದೊಂದು ಕಪ್ಪು ಚುಕ್ಕಿ.

ಕಾನೂನುಬಾಹಿರವಾಗಿ, ಮಂಜೂರಾತಿ ಶರ್ತ ಉಲ್ಲಂಘಿಸಿ ಕಟ್ಟಲಾಗಿದ್ದ ಸಮಾಜ ಮಂದಿರವನ್ನು ಕೆಡವಿದ ನಂತರ 61 ಸೆಂಟ್ಸ್ ಅನುದಾನಿತ ಸರಕಾರಿ ಸ್ಥಳವನ್ನು ಬೆಳ್ತಂಗಡಿ ಸಮಾಜ ಮಂದಿರ ಬಿಲ್ಡಿಂಗ್ ಸೊಸಾೈಟಿಯಿಂದ ಸರಕಾರಕ್ಕೆ ನಿಯಾಮಾನುಸಾರ ಸ್ವಾಧೀನಪಡಿಸಿ ಈ ಸ್ಥಳದಲ್ಲಿ ಪರಭವನ ರಚಿಸಬೇಕಾಗಿ ವಿನಂತಿ. ಸಮಾಜ ಮಂದಿರದವರು ಶರ್ತ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು ತನಿಖೆಯಾಗುತ್ತಿದೆ. ಈ ಸಮಾಜ ಮಂದಿರ ಬಿಲ್ಡಿಂಗ್ ಸೊಸಾೈಟಿಗೆಂದೇ ಖಾಸಗಿಯವರಿಂದ ಖರೀದಿಸಲು ಕರಾರು ಮಾಡಿಕೊಂಡಿದ್ದ 20 ಸೆಂಟ್ಸ್ ಸ್ಥಳವನ್ನು ಕಾನೂನುಬಾಹಿರವಾಗಿ ಶಾಂತಿವನ ಟ್ರಸ್ಟ್ (ರಿ) ಇದರ ಹೆಸರಿಗೆ ರಿಜಿಸ್ಟ್ರೀಯಾಗಿದ್ದು ಈ ಸ್ಥಳದಲ್ಲಿ ಮತ್ತು ಇವರು ಕ್ರಯಕ್ಕೆ ಪಡೆದ ಪಕ್ಕದ ಸ್ಥಳದಲ್ಲಿ ಶಾಂತಿವನ ಟ್ರಸ್ಟಿನ ಶ್ರೀ ಮಂಜುನಾಥಸ್ವಾಮಿ ಕಲಾಭವನ ನಿರ್ಮಾಣವಾಗಿದ್ದು ದುಬಾರಿ ಬಾಡಿಗೆಗೆ ನೀಡಲಾಗುತ್ತಿದೆ.

ಸರಕಾರಿ ಸ್ಥಳವನ್ನು ಸರಕಾರಿ ಸ್ವಾಮ್ಯದ ಸಮಾಜಮಂದಿರ/ಪುರಭವನ ರಚನೆಗೆ ಮಾತ್ರ ಕೊಡಬೇಕು. ಈ ಸ್ಥಳ ಖಾಸಗಿಯವರ ಲಾಭದಾಯಕ ಕಲ್ಯಾಣ ಮಂಟಪಕ್ಕಾಗಿ ಕೊಡಬಾರದು.

ಬೆಳ್ತಂಗಡಿ ಸಮಾಜ ಮಂದಿರ ಬಿಲ್ಡಿಂಗ್ ಸೊಸಾೈಟಿಯ ಬ್ಯೆಲಾ ಪ್ರಕಾರ ಇದರ ಏಕೈಕ ಉದ್ದೇಶ ಸಮಾಜ ಮಂದಿರ ಮತ್ತು ಇದರಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು. ಸಮಾಜ ಮಂದಿರ ಕೆಡವಿದ ಮೇಲೆ ಈ ಸೊಸಾೈಟಿಯ ಅಗತ್ಯವಾದರೂ ಏನು ? ಇದನ್ನು ವಿಸರ್ಜಿಸಬಹುದಲ್ಲವೇ ? ಡಿ ವೀರೇಂದ್ರ ಹೆಗ್ಗಡೆಯವರನ್ನು ಇದರ ಆಜೀವ ಅಧ್ಯಕ್ಷರನ್ನಾಗಿ ಮಾಡಿರುವ ಹಿಂದಿರುವ ಉದ್ದೇಶವೇನು ? ಇದಕ್ಕೆ ಕಾನೂನಿನಲ್ಲಿ ಅವಕಾಶ ವಿದೆಯೇ ?

ಬೆಳ್ತಂಗಡಿ ಪಟ್ಟಣ ಪಂಚಾಯತ್ ನಿಧಿ, ತಮ್ಮ ಶಾಸಕರ ನಿಧಿ ಮತ್ತು ಸರಕಾರದ ಅನುದಾನದಿಂದ ಶೀಘ್ರವೇ ಪುರಭವನ ರಚಿಸಲು ಸಾಧ್ಯ. ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ಇದರ ಉದ್ಘಾಟನೆಯನ್ನೂ ತಾವು ನೇರವೇರಿಸಬೇಕೆಂದು ನಮ್ಮ ಆಶಯ – ಒತ್ತಾಯ. ಸಮಾಜ ಮಂದಿರ ರಚಿಸಲು ಕಾರಣರಾಗಿದ್ದವರನ್ನು (ದಿ ರಾಮ ನಾಯಕ್, ದಿ ಡಾ ಬಿ ನಾರಾಯಣ ರಾವ್, ದಿ ದಾದಾ ಹಾಜಿ ಇಬ್ರಾಹಿಂ, ಭಿಡೆ ನಾರಾಯಣ ಭಟ್, ದಿ ಮಾಣಿ ಗಣಪತಿ ಭಟ್, ದಿ ಕುಡ್ಡಿ ಶ್ರೀನಿವಾಸ ಶೆಣೈ, ದಿ ಸತ್ಯಭಾಮಾ ಕೃಷ್ಣ ಭಟ್, ದಿ ವಾಮನ ಪ್ರಭು, ದಿ ನರಸಿಂಹ ಭಟ್, ದಿ ಜಿ ಎನ್ ಭಿಡೆ, ದಿ ಎಂ ಮುಕುಂದ ಪ್ರಭು ಮುಂತಾದವರು.) ಶಾಶ್ವತವಾಗಿ ನೆನಪಿಸುವ ವ್ಯವಸ್ಥೆಯೊಂದಿಗೆ ಸುಸಜ್ಜಿತ ಪುರಭವನ ರಚಿಸಿ, ಕಡಿಮೆ ಬಾಡಿಗೆಯಲ್ಲಿ ಸಭೆ ಸಮಾರಂಭಗಳಿಗೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ, ಮದುವೆ ಮುಂತಾದ ಶುಭಾಕಾರ್ಯಗಳಿಗೆ ನೀಡಬಹುದು. ಗಣೇಶೋತ್ಸವ, ಶಾರದೋತ್ಸವ, ಶಿಕ್ಷಕರ ದಿನಾಚರಣೆಗಳಿಗೆ ಉಚಿತವಾಗಿ ಅಥವಾ ರಿಯಾಯ್ತಿ ಬಾಡಿಗೆಯಲ್ಲಿ ನೀಡಬೇಕು. ಸರಕಾರಿ ಕಾರ್ಯಕ್ರಮಗಳನ್ನು  ಇದರಲ್ಲೇ ಮಾಡಬಹುದು. ಇದರ ನಿಯಂತ್ರಣ ಶಾಸಕರ ಮತ್ತು ಪುರಸಭೆಯ ಕೈಯಲ್ಲಿರಬೇಕು.

ದಯಮಾಡಿ ಈ ಕುರಿತು ಬೆಳ್ತಂಗಡಿ ಶಾಸಕರು ಖುದ್ದು ಆಸಕ್ತಿ ವಹಿಸಿ ಬೆಳ್ತಂಗಡಿ ತಾಲೂಕಿನ ಈ ಪ್ರಮುಖ ಅಗತ್ಯವನ್ನು ಈಡೇರಿಸಬೇಕಾಗಿ ಆಗ್ರಹಪೂರ್ವಕ ಮನವಿ. ಬೆಳ್ತಂಗಡಿ ತಾಲೂಕಿನ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಈ ವಿಷಯದಲ್ಲಿ ತಮಗೆ ಸಂಪೂರ್ಣ ಸಹಕಾರ-ಬೆಂಬಲ ನೀಡುವುದರಲ್ಲಿ ಸಂದೇಹವಿಲ್ಲ.

  • ಕೆ ಸೋಮನಾಥ ನಾಯಕ್

    ಅಧ್ಯಕ್ಷರು, ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ