ಹೆಸರಿಲ್ಲದ ನಗರ ರಸ್ತೆಗಳಲ್ಲಿ ದಾರಿ ತಪ್ಪುವ ಪ್ರವಾಸಿಗರು !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರಿಗೆ ದೂರದೂರುಗಳ ಪ್ರವಾಸಿಗರು ಆಗಮಿಸಿದರೆ ಸುಲಭವಾಗಿ ನಿರ್ದಿಷ್ಟ ಸ್ಥಳ ತಲುಪಲು ಸಾಧ್ಯವಿಲ್ಲ. ಯಾಕೆಂದರೆ, ಮನಪಾ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ದಿಕ್ಕು ತೋರಿಸುವಂತಹ ಸೂಕ್ತ ನಾಮಫಲಕಗಳಿಲ್ಲ. ನಗರದ ಹಲವು ವಾರ್ಡುಗಳಲ್ಲಿ ಪಾದಚಾರಿಗಳಿಗೆ ನಿರ್ದೇಶನ ನೀಡುವಂತಹ ಫಲಕಗಳೇ ನಾಪತ್ತೆಯಾಗಿವೆ.

ರಸ್ತೆ ಕಾಮಗಾರಿ ವೇಳೆ ಕೆಲವಾರು ನಾಮಫಲಕಗಳು ನಾಮಾವಶೇಷವಾಗಿವೆ. ಆದರೆ ಇದು ಹೇಳಿಕೊಳ್ಳುವಂತಹ ಗಹನವಾದ ವಿಷಯವಲ್ಲ ಎಂದು ಮನಪಾ ಇಂಜಿನಿಯರುಗಳು ಉದಾಸೀನತೆ ತೋರಿದ್ದಾರೆ.

ನಗರದ ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ಸ್ಥಳೀಯರಿಗಲ್ಲದೆ, ಪ್ರವಾಸಿಗರಿಗೂ ನೆರವಾಗುತ್ತದೆ. ಆದರೆ ಮನಪಾ ಈ ವಿಷಯದತ್ತ ನಿರ್ದಿಷ್ಟ ಕಾಳಜಿ ಹರಿಸಿಲ್ಲ.

ಇಲ್ಲಿನ ಶೇ 75 ರಸ್ತೆಗಳಿಗೆ ಹೆಸರೇ ಇಲ್ಲ. ಶಿವರಾಮ ಕಾರಂತ ಹಾಗೂ ಕಾರ್ನಾಡು ಸದಾಶಿವ ರಾವ್(ಕೆ ಎಸ್ ರಾವ್) ರಸ್ತೆ ಗುರುತಿಸಲು ಕಷ್ಟವಾಗುತ್ತಿದೆ. ಈಗ ನಗರದಲ್ಲಿರುವ ಜನಪ್ರಿಯ ಕಟ್ಟಡಗಳು ಅಥವಾ ಮಾಲುಗಳ ಮೂಲಕ ಸ್ಥಳೀಯ ರಸ್ತೆ ಗುರುತಿಸುವಂತಹ ಪರಿಸ್ಥಿತಿ ಇದೆ. ನಗರದೊಳಗಿನ ಬಹುತೇಕ ಕ್ರಾಸ್ ರಸ್ತೆಗಳಿಗೆ ಹೆಸರೇ ಇಲ್ಲ.

ರಸ್ತೆಗಳಿಗೆ ಹೆಸರಿಡುವಂತಹ ಕಾಮಗಾರಿಗೆ ದೊಡ್ಡ ಪ್ರಮಾಣದ ಬಜೆಟ್ ಅಗತ್ಯವಿಲ್ಲ ಮತ್ತು ಇದರಿಂದ ತಮಗೆ ಲಾಭವಿಲ್ಲ ಎಂಬ ಕಾರಣಕ್ಕಾಗಿ ಕಾರ್ಪೊರೇಟರುಗಳು ರಸ್ತೆಗಳಿಗೆ ಹೆಸರಿಡುವ ಅಥವಾ ನಾಮಫಲಕ ಅಳವಡಿಸುವಂತಹ ಕೆಲಸದ ಬಗ್ಗೆ ಆಸಕ್ತಿ ಹೊಂದಿಲ್ಲ  ಎನ್ನಲಾಗುತ್ತಿದೆ.

ಸ್ಥಳೀಯ ಪ್ರಾಧಿಕಾರವು ರಸ್ತೆಗಳಿಗೆ ಒಬ್ಬ ವ್ಯಕ್ತಿಯ ಹೆಸರಿಡಬೇಕು ಅಥವಾ ಸರಳ ಹೆಸರೊಂದು ಗೊತ್ತುಪಡಿಸಬೇಕು. ಆದರೆ ಈ ನಿಯಮವನ್ನು ಮನಪಾ ಆಡಳಿತ ಪರಿಗಣಿಸಿಲ್ಲ.

ತಮ್ಮ ವಾರ್ಡುಗಳ ಸೌಂದರ್ಯೀಕರಣದೊಂದಿಗೆ ವಾರ್ಡುಗಳಿಗೆ ಹೆಸರಿಡುವುದು, ರಸ್ತೆಗಳಿಗೆ ಹೆಸರಿಡುವುದು ಮತ್ತು ಅಂತರ ಗುರುತಿಸುವಂತಹ ಕೆಲಸ ಮಾಡಬೇಕೆಂದು ಎಲ್ಲ ಕಾರ್ಪೊರೇಟರುಗಳಿಗೆ ಸೂಚನೆ ನೀಡಲಾಗಿದೆ ಎಂದು ಮನಪಾ ಮೇಯರ್ ಕವಿತಾ ಸನಿಲ್ ತಿಳಿಸಿದರು.