ಪ್ರವಾಸಿ ವಾಹನದ ಬ್ರೇಕ್ ಫೇಲ್ : ನಾಲ್ವರು ಆಸ್ಪತ್ರೆಗೆ

ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಸ್ಥಳದಲ್ಲಿ ಸೇರಿದ ಜನ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಮಲಶಿಲೆ ಗುಹಾಂತರ ದೇವಳದ ದೇವರ ದರ್ಶನಕ್ಕೆಂದು ತೆರಳಿದ ಪ್ರವಾಸಿಗರ ವಾಹನದ ಬ್ರೇಕ್ ಫೇಲಾಗಿ ಇಳಿಜಾರಿನ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾಡಿನೊಳಗೆ ಕಂದಕ್ಕೆ ಉರುಳಿದ ಘಟನೆ ಭಾನುವಾರ ಕಮಲಶಿಲೆಯಲ್ಲಿ ನಡೆದಿದೆ.

ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಶ್ರೀನಿವಾಸ್ ಕಿಣಿ (50), ಹೇಮಲತಾ (50), ಶ್ರೀಶ (10), ಲಕ್ಷ್ಮಣ್ ನಾಯಕ್ (57) ಎಂದು ಗುರುತಿಸಲಾಗಿದೆ.

ಭಾನುವಾರ ರಜೆ ಹಿನ್ನೆಲೆಯಲ್ಲಿ ಕಮಲಶಿಲೆ ದೇವಳಕ್ಕೆ ತೆರಳಿದ್ದು, ದೇವರದರ್ಶನ ಮುಗಿಸಿ, ಅಲ್ಲಿಂದ ಬ್ರಾಹ್ಮಿ ದುರ್ಗಾ ಪರಮೇಶ್ವರಿ ಮೂಲಸ್ಥಾನ ಕಮಲಶಿಲೆ ಗುಹೆಗೆ ತೆರಳಿದ್ದರು. ಅಲ್ಲಿಂದ ಬರುವ ಸಂದರ್ಭ ಚಾಲಕ ಅತೀವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದ ಎನ್ನಲಾಗಿದ್ದು, ಇದೇ ವೇಳೆ ವಾಹನದ ಬ್ರೇಕ್ ಫೇಲಾಗಿತ್ತು ಎನ್ನಲಾಗಿದೆ. ಕಡಿದಾದ ತಿರುವು ಇದ್ದುದರಿಂದ ವಾಹನವನ್ನು ತಿರುಗಿಸಿಕೊಳ್ಳಲಾಗದೇ ನೇರವಾಗಿ ಹೋಗಿ ರಸ್ತೆಯ ಬದಿಯ ಹಾಡಿಯೊಳಗಿನ ಕಮರಿಗೆ ಬಿದ್ದಿದೆ. ವಾಹನದಲ್ಲಿ ಸುಮಾರು 15 ಮಂದಿ ಪ್ರಯಾಣಿಕರಿದ್ದು, ನಾಲ್ವರು ತೀವ್ರ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದಾರೆ.

ಪ್ರಯಾಣಿಕರು ಕಾಪು ಎಲ್ ಐ ಸಿ ಸಂಸ್ಥೆಯ ಉದ್ಯೋಗಿಗಳು ಮತ್ತು ಅವರ ಕುಟುಂಬದವರಾಗಿದ್ದಾರೆ. ಘಟನೆ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.