ಸತತ 9 ಏಕದಿನ ಕ್ರಿಕೆಟ್ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ಈಗ ಐಸಿಸಿ ಅಗ್ರಪಟ್ಟ

  • ಎಸ್ ಜಗದೀಶ್ಚಂದ್ರ ಅಂಚನ್

ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದಿರುವ ಟೀಂ ಇಂಡಿಯಾ ಮತ್ತೊಂದು ಸಾಧನೆಗೆ ಹೊಸ ಹೆಜ್ಜೆಯನ್ನಿಟ್ಟಿದೆ.

ದಕ್ಷಿಣ ಆಫ್ರಿಕಾದ ವಿರುದ್ಧ ಗೆದ್ದಿರುವ ಈ ದ್ವಿಪಕ್ಷೀಯ ಏಕದಿನ ಸರಣಿ ಗೆಲುವು ವಿರಾಟ್ ಬ್ರಿಗೇಡಿಗೆ ದೊರೆತ ಸತತ ಒಂಭತ್ತನೇ ಸರಣಿ ವಿಜಯೋತ್ಸವ. ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದ್ದ ಸತತ ಎಂಟು ಸರಣಿ ಜಯಗಳ ದಾಖಲೆಯನ್ನು ಕೊಹ್ಲಿ ಪಡೆ ಮುರಿದಿದೆ. 1980-88ರ ಅವಧಿಯಲ್ಲಿ ಸತತ 14 ಏಕದಿನ ಕ್ರಿಕೆಟ್ ಸರಣಿಗಳನ್ನು ಗೆದ್ದಿದ್ದ ವೆಸ್ಟ್ ಇಂಡೀಸ್ ಹೆಸರಿನಲ್ಲಿ ವಿಶ್ವದಾಖಲೆ ಇದೆ. ಈಗ ಟೀಂ ಇಂಡಿಯಾ ವಿಶ್ವ ಚಾಂಪ್ಯನ್ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ 1992ರಲ್ಲಿ ಮೊಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ ಮೊದಲ ಬಾರಿ ಏಕದಿನ ಕ್ರಿಕೆಟ್ ಸರಣಿಯನ್ನು ಆಡಿತ್ತು. ಏಳು ಏಕದಿನ ಪಂದ್ಯಗಳ ಈ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 5-2 ಅಂತರದಲ್ಲಿ ಸರಣಿ ಗೆದ್ದಿತ್ತು. ಅಲ್ಲಿಂದ ಈ ಕ್ರಿಕೆಟ್ ಸರಣಿಯ ಮೊದಲು ಉಭಯತಂಡಗಳ ನಡುವೆ ನಾಲ್ಕು ಏಕದಿನ ಕ್ರಿಕೆಟ್ ಸರಣಿಗಳು ನಡೆದಿದ್ದರೂ ಟೀಂ ಇಂಡಿಯಾಕ್ಕೆ ಗೆಲುವು ದಕ್ಕಿರಲಿಲ್ಲ.

ದಕ್ಷಿಣ ಆಫ್ರಿಕಾ 2006-07ರಲ್ಲಿ 4-0, 2010-11ರಲ್ಲಿ 3-2 ಹಾಗೂ 2013-14ರಲ್ಲಿ 2-0 ಅಂತರದಲ್ಲಿ ಏಕದಿನ ಕ್ರಿಕೆಟ್ ಸರಣಿಯನ್ನು ಸ್ವದೇಶದಲ್ಲಿ ಗೆದ್ದಿತ್ತು. ಅಲ್ಲಿಂದ 26 ವರ್ಷಗಳ ನಂತರ ಟೀಂ ಇಂಡಿಯಾ ಮೊದಲ ಬಾರಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಟೀಂ ಇಂಡಿಯಾದ ಯಾವ ನಾಯಕರು ಮಾಡದ ಸಾಧನೆಯನ್ನು ವಿರಾಟ್ ಕೊಹ್ಲಿ ತನ್ನ ನಾಯಕತ್ವದಲ್ಲಿ ಮಾಡಿ ತೋರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಐಸಿಸಿ ಏಕದಿನ ಶ್ರೇಯಾಂಕ ದಲ್ಲೂ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಫೆಬ್ರವರಿ-16ರಂದು ನಡೆಯುವ ಕೊನೆಯ ಪಂದ್ಯದಲ್ಲೂ ಒಂದು ವೇಳೆ ಟೀಂ ಇಂಡಿಯಾ ಸೋತರೂ ನಂಬರ್ ಸ್ಥಾನಕ್ಕೆ ಯಾವುದೇ ಧಕ್ಕೆಯಿಲ್ಲ. ಈ ಮೊದಲು ದ್ವಿತೀಯ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಈಗ 122 ಅಂಕ ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಗ್ರಸ್ಥಾನ ದಲ್ಲಿದ್ದ ದಕ್ಷಿಣ ಆಫ್ರಿಕಾ ಈಗ 118 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

LEAVE A REPLY