2016ರಲ್ಲಿ ಸುದ್ದಿಗೆ ಗ್ರಾಸವಾದ ಟಾಪ್ 10 ವಿವಾದ

ಹೊಸ ವರ್ಷದ ಆಗಮನವನ್ನು ಎದುರು ನೋಡುತ್ತಿರುವ ಈ ಸಮಯದಲ್ಲಿ 2016ರಲ್ಲಿ  ಭಾರತೀಯರ ಗಮನವನ್ನು ಸೆಳೆದು ಪತ್ರಿಕೆಗಳ ಮುಖಪುಟದಲ್ಲಿ  ರಾರಾಜಿಸಿದ ಹತ್ತು ವಿವಾದಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.


ರೋಹಿತ್ ವೇಮುಲಾ ಆತ್ಮಹತ್ಯೆ

ಎಬಿವಿಪಿ ವಿದ್ಯಾರ್ಥಿ ನಾಯಕನೊಬ್ಬನ ಮೇಲೆ ಹಲ್ಲೆಗೈದ ಆರೋಪದ ಮೇಲೆ ದಲಿತ ಸಂಶೋಧಕನಾಗಿದ್ದ ರೋಹಿತ್ ವೇಮುಲಾ ಮತ್ತು ಇತರ ನಾಲ್ಕು ಮಂದಿಯನ್ನು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಹಾಸ್ಟೆಲ್ಲಿನಿಂದ ಹೊರಗಟ್ಟಿದ ಘಟನೆಯ ನಂತರ ವೇಮುಲಾ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಾಗ ಅದು  ಕೋಲಾಹಲವನ್ನೇ ಸೃಷ್ಟಿಸಿತ್ತು.


ಜೆಎನ್ಯು ದೇಶದ್ರೋಹ ವಿವಾದ

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ವಿವಾದಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅಲ್ಲಿ ದೇಶ ವಿರೋಧೀ ಘೋಷಣೆಗಳನ್ನು ಕೂಗಿದ್ದಾರೆನ್ನಲಾದ ಜೆಎನ್ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾದಾಗ ರಾಷ್ಟ್ರೀಯವಾದದ ಕುರಿತಾದ ಚರ್ಚೆ ಮತ್ತೆ ಗರಿಗೆದರಿತ್ತು.


ಗುಜರಾತ್ ದಲಿತ ಯುವಕರ ಮೇಲಿನ ಅಮಾನುಷ ಹಲ್ಲೆ

ಸ್ವಘೋಷಿತ ಗೋರಕ್ಷಕರೆನಿಸಿಕೊಂಡವರಿಂದ ಜುಲೈ ತಿಂಗಳಲ್ಲಿ ಗುಜರಾತ್ ರಾಜ್ಯದ ಉನಾದಲ್ಲಿ  ಏಳು ಮಂದಿ ದಲಿತರ ಮೇಲೆ ದನದ ಚರ್ಮ ಸುಲಿದಿದ್ದಾರೆಂಬ ಕಾರಣಕ್ಕೆ ನಡೆಸಿದ ಅಮಾನುಷ ಹಲ್ಲೆ ರಾಜ್ಯಾದ್ಯಂತ ದಲಿತರ ಆಕ್ರೋಶ ಹಾಗೂ ಪ್ರತಿಭಟನೆಗಳಿಗೂ ಕಾರಣವಾಗಿತ್ತು.  ದಲಿತರು ಚರ್ಮ ಸುಲಿಯುತ್ತಿದ್ದ ದನವನ್ನು ಅವರು ಸಾಯಿಸಿರಲಿಲ್ಲ, ಅದನ್ನು ಸಿಂಹವೊಂದು ಕೊಂದಿತ್ತೆಂದು ಗುಜರಾತ್ ಸಿಐಡಿ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿತ್ತು


ಕಾಶ್ಮೀರ ಬಿಕ್ಕಟ್ಟು

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರ ಬುರ್ಹಾನ್ ವನಿಯನ್ನು ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ಜುಲೈ 8ರಂದು ಎನ್ಕೌಂಟರ್ ಒಂದರಲ್ಲಿ ಸಾಯಿಸಿದಂದಿನಿಂದ ಕಾಶ್ಮೀರ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದು ಜನಜೀವನವನ್ನು ತಿಂಗಳುಗಳಿಂದ ಅಸ್ತವ್ಯಸ್ತಗೊಳಿಸಿದೆ.


ಮಾಯಾವತಿ ಅವಹೇಳನ

ಬಹುಜನ ಸಮಾಜ  ಪಕ್ಷದ ನಾಯಕಿ ಮಾಯಾವತಿಯನ್ನು ಲೈಂಗಿಕ ಕಾರ್ಯಕರ್ತೆಗೆ ಹೋಲಿಸಿ,  ಮಾಜಿ ಮುಖ್ಯಮಂತ್ರಿಯಾಗಿರುವ ಆಕೆ ಉತ್ತರ ಪ್ರದೇಶ ಚುನಾವಣೆಗಿಂತ ಮುಂಚೆಯೇ ಟಿಕೆಟ್ ಮಾರಾಟ ಮಾಡಿದ್ದಾರೆಂದು ಆರೋಪಿಸಿ ಆಕೆಯನ್ನು ಅವಹೇಳನಗೈದ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರನ್ನು ಪಕ್ಷವು ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಬೆದರಿ ಆರು ವರ್ಷಗಳ ಕಾಲ ಉಚ್ಛಾಟಿಸಿತ್ತು.


ಕಾವೇರಿ ವಿವಾದ

ಕಾವೇರಿ ನದಿ ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ವಸ್ತುಶಃ ಸಂಘರ್ಷಮಯ ವಾತಾವರಣ ಉಂಟು ಮಾಡಿತ್ತು.  ನಮ್ಮ ರೈತರಿಗೇ ನೀಡಲು ನೀರಿಲ್ಲದೇ ಇರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೆಲ್ಲಿ ಬಂತು ಎಂಬ ರಾಜ್ಯದ ವಾದಕ್ಕೆ ಬೆಲೆಯಿಲ್ಲದಂತಾಗಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿ ಮೈಸೂರು-ಮಂಡ್ಯ ಭಾಗಗಳಲ್ಲಿ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದವಲ್ಲದೆ ರಾಜ್ಯ ಬಂದ್ ಮಾಡಲು ಕರೆ ನೀಡಲಾಗಿತ್ತು.


 ತ್ರಿವಳಿ ತಲಾಖ್ ಗೊಂದಲ

ತ್ರಿವಳಿ ತಲಾಖ್ ಪದ್ಧತಿ ಹಾಗೂ ಪೋಸ್ಟ್, ಇಮೇಲ್ ಹಾಗೂ ಎಸ್ಸೆಮ್ಮೆಸ್ ಮೂಲಕ ತಲಾಖ್ ನೀಡುವ ಪದ್ಧತಿಯನ್ನು  ನಿಷೇಧಿಸಬೇಕೆಂದು ಕೋರಿ ಅಖಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ತಾನು ಸುಪ್ರೀಂ ಕೋರ್ಟ್ ಕದ ತಟ್ಟುವುದಾಗಿ ಹೇಳಿದಾಗ ಈ ವಿವಾದ ಆರಂಭವಾಗಿತ್ತು. ಆದರೆ ತ್ರಿವಳಿ ತಲಾಖ್ ಪದ್ಧತಿಯ ಪರವಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಣಯ ಕೈಗೊಂಡಿತ್ತು. ಸರಕಾರ ಮುಸ್ಲಿಮರ ವೈಯಕ್ತಿಕ ಕಾನೂನಿನ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆಯೆಂದೂ ಆರೋಪಿಸಲಾಗಿತ್ತು. ಆದರೆ ಯಾವುದೇ ವೈಯಕ್ತಿಕ ಕಾನೂನು ಮಂಡಳಿ ಸಂವಿಧಾನಕ್ಕಿಂತ ಮೇಲಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು.


ಸಮಾಜವಾದಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು

ಶಿವಪಾಲ್ ಯಾದವ್ ಅವರನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರೋಧವಿದ್ದರೂ ರಾಜ್ಯ ಸಮಾಜವಾದಿ ಪಕ್ಷದ ಅಧ್ಯಕ್ಷರನ್ನಾಗಿ ಸೆಪ್ಟೆಂಬರ್ ತಿಂಗಳಲ್ಲಿ ನೇಮಕ ಮಾಡಿದಾಗ ಪಕ್ಷದೊಳಗಿನ ಅಸಮಾಧಾನ ಹೊರಜಗತ್ತಿಗೆ ತಿಳಿದು ಬಂದಿತ್ತು.  ಅಖಿಲೇಶ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿರುವುದು ತಪ್ಪು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮುಲಾಯಂ ಸಂಬಂಧಿ ರಾಮ್ ಗೋಪಾಲ್ ಯಾದವ್ ಹೇಳಿದಾಗ ಶಿವಪಾಲ್ ಹುದ್ದೆ ತ್ಯಜಿಸಿದ್ದರು.


ಬಿಜೆಪಿಯಿಂದ ಹೊರನಡೆದ ಸಿದ್ದು

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಬಿಜೆಪಿಯಿಂದ ಹೊರನಡೆದು ತಮ್ಮ ರಾಜಕೀಯೇತರ ಸಂಘಟನೆ ಸ್ಥಾಪಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು.  ಸಿದ್ದು  ಎಎಪಿ ಸೇರುತ್ತಾರೆಂದು ಹೇಳಲಾಗಿತ್ತಾದರೂ ಅದು ನಿಜವಾಗಿಲ್ಲ. ಅವರ ಮುಂದಿನ ನಡೆಯ ಬಗ್ಗೆ ಸಾಕಷ್ಟು ಕುತೂಹಲವಿದೆ.


ಬಿಸಿಸಿಐ ವಿವಾದ

ಈ ವಿವಾದ ವರ್ಷದಾದ್ಯಂತ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಲು ಬಿಸಿಸಿಐ ಮನಸ್ಸು ಮಾಡದೇ ಇರುವುದು ಸಮಸ್ಯೆ ಕಾರಣವಾಗಿದೆ. ಕ್ರಿಕೆಟ್ ಸಂಸ್ಥೆಯಲ್ಲಿ  ಸುಧಾರಣೆ ತರಲು ನಡೆಸಲಾಗುವ ಯತ್ನಗಳನ್ನು ತಡೆದರೆ ಜೈಲಿಗೆ ಹೋಗಬೇಕಾದೀತೆಂದು ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಅವರಿಗೆ ಎಚ್ಚರಿಕೆಯನ್ನೂ ನೀಡಿತ್ತು. ಅಕ್ಟೋಬರ್ 1ರಂದು ಬಿಸಿಸಿಐ ತಾನು ಲೋಧಾ ಸಮಿತಿಯ ಹೆಚ್ಚಿನ ಮಹತ್ವದ ಶಿಫಾರಸುಗಳನ್ನು ಒಪ್ಪಿರುವುದಾಗಿ ಹೇಳಿದ್ದರೂ ಲೋಧಾ ಸಮಿತಿ ಹಾಗೂ ಬಿಸಿಸಿಐ ನಡುವೆ ವಿವಾದಕ್ಕೆ ಕಾರಣವಾಗಿದ್ದ  ಕೆಲವು ಶಿಫಾರಸುಗಳನ್ನು ಮಾತ್ರ ಬಿಸಿಸಿಐ ಕೈಬಿಟ್ಟಿದೆ.