ತೊಗರಿಬೇಳೆ ರಿಯಾಯಿತಿ ದರ, ಪೂರೈಕೆಯ ಮೇಲೆ ಪರಿಣಾಮ

ಮಂಗಳೂರು : ಬಿಪಿಎಲ್ ಕಾರ್ಡುದಾರರಿಗೆ ತೊಗರಿಬೇಳೆಯನ್ನು ರಿಯಾಯಿತಿ ದರದಲ್ಲಿ ಪಿಡಿಎಸ್ ಮೂಲಕ ಪೂರೈಸುತ್ತಿರುವುದರಿಂದ ತೊಗರಿಬೇಳೆ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಜಿಲ್ಲೆಗೆ ಸಾಕಷ್ಟು ಪ್ರಮಾಣದ ತೊಗರಿಬೇಳೆ ಪೂರೈಕೆಗೆ ಟೆಂಡರುದಾರರು ವಿಫಲರಾಗಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ `ಟೆಂಡರುದಾರರು ಟೆಂಡರು ಪಡೆದ ಸಂದರ್ಭ ತೊಗರಿಬೇಳೆ ದರ ಕಡಿಮೆ ಇತ್ತು. ಆದರೆ ಈಗ ತೊಗರಿಬೇಳೆ ಬೆಲೆ ಏರಿದೆ. ಹಾಗಾಗಿ ಟೆಂಡರುದಾರರು ತೊಗರಿಬೇಳೆ ಪೂರೈಕೆಗೆ ವಿಫಲರಾಗಿದ್ದಾರೆ. ಅವಶ್ಯಕ ತೊಗರಿಬೇಳೆ ಪೂರೈಕೆಯ ವೈಫಲ್ಯದ ಬಗ್ಗೆ ಈಗಾಗಲೇ 10 ಟೆಂಡರುದಾರರಿಗೆ ನೋಟಿಸ್ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

“ಎಪ್ರಿಲ್ 15 ರವರೆಗೆ ಕಾಯುತ್ತೇವೆ, ನಂತರ ಪ್ರತಿ ಟೆಂಡರ್ ಆಹ್ವಾನಿಸುತ್ತೇವೆ. ಟೆಂಡರುದಾರರು ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 2,177 ಕ್ವಿಂಟಾಲ್ ತೊಗರಿಬೇಳೆ ಪೂರೈಸಬೇಕಿತ್ತು. ಆದರೆ ಕೇವಲ 150 ಕ್ವಿಂಟಾಲ್ ತೊಗರಿಬೇಳೆ ಪೂರೈಸಿದ್ದಾರೆ. ಇದು ಅವಶ್ಯಕತೆಗಿಂತ ಬಹಳ ಕಡಿಮೆ ಪೂರೈಕೆ” ಎಂದು ಖಾದರ್ ಹೇಳಿದ್ದಾರೆ.

ಇದೇ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮುಖಾಂತರ ರೈತರಿಂದ ನೇರವಾಗಿ ತೊಗರಿಬೇಳೆ ಖರೀದಿಸಲು ಚಿಂತನೆ ನಡೆಸುತ್ತಿದೆ ಎಂದೂ ಸಚಿವರು ತಿಳಿಸಿದ್ದಾರೆ.